ಕೊಲೆಯಾದ ದಯಾನಂದ್​ 
ಜಿಲ್ಲೆ

ಮಿಸ್ಡ್​ಕಾಲ್​ ಆಂಟಿಯಿಂದ ಬರ್ಬರ ಹತ್ಯೆಯಾದ ಕಲಬುರಗಿ ಯುವಕ! ಸುಪಾರಿ ಪಡೆದು ಕೊಲೆ ಮಾಡಿದ ಕ್ರೂರಿ...

ಕಲಬುರಗಿ: ಕಲಬುರಗಿ ನಗರದ ಹೊರವಲಯಲ್ಲಿ ವಾರದ ಹಿಂದೆ ಭೀಕರವಾಗಿ ಕೊಲೆಯಾದ ದಯಾನಂದ್ ಲಾಡಂತಿ ಎಂಬ 26 ವರ್ಷದ ಯುವಕನ ಸಾವಿನ ರಹಸ್ಯವನ್ನು ಕೊನೆಗೂ ಪೊಲೀಸರು ಭೇದಿಸಿದ್ದಾರೆ. ಇದರ ಹಿಂದೆ ಮಹಿಳೆಯೊಬ್ಬರ ಕೈವಾಡ ಇರುವುದು ತಿಳಿದುಬಂದಿದೆ.

ಆರಂಭದಲ್ಲಿ ಗ್ರಾಮದವರೇ ಇಬ್ಬರು ಕೊಲೆ ಮಾಡಿದ್ದಾರೆ ಅಂತ ಕುಟುಂಬದವರು ಆರೋಪಿಸಿದ್ದರು. ಆದರೆ ಪ್ರಕರಣದ ತನಿಖೆ ನಡೆದಾಗ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಯಾಕೆಂದರೆ ವಿವಾಹಿತೆ, ಒಂದು ಮಗುವಿನ ತಾಯಿಯೊಬ್ಬಳು ದಯಾನಂದ್​ ಜತೆ ಪ್ರೀತಿಯ ನಾಟಕವಾಡಿ ತಾನೇ ಮುಂದೆ ನಿಂತು ಕೊಲೆ ಮಾಡಿಸಿರುವುದು ತಿಳಿದುಬಂದಿದೆ.

ಘಟನೆ ವಿವರ:

ದಯಾನಂದ್​ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಶುಕ್ರವಾಡಿ ಗ್ರಾಮದ ನಿವಾಸಿ. ದುಬೈನಲ್ಲಿ ಪೇಟಿಂಗ್ ಕೆಲಸ ಮಾಡುತ್ತಿದ್ದರು. ನಾಲ್ಕೈದು ತಿಂಗಳ ಹಿಂದಷ್ಟೇ ಊರಿಗೆ ಬಂದಿದ್ದರು. ಮತ್ತೆ ದುಬೈಗೆ ಹೋಗಲು ಸಿದ್ದತೆ ನಡೆಸಿದ್ದರು.

ಜೂನ್ 24 ರಂದು ಪಾಸಪೋರ್ಟ್ ಕೆಲಸದ ನಿಮಿತ್ತ ಹೊರಗೆ ಹೋದವರು ವಾಪಸ್​ ಬರಲೇ ಇಲ್ಲ. ಸಂಜೆ ವೇಳೆಗೆ ಗೊತ್ತಾದದ್ದು ಅವರ ಕೊಲೆಯಾಗಿದೆ ಎನ್ನುವ ಸುದ್ದಿ! ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ಗ್ರಾಮದವರೇ ಇಬ್ಬರು ಕೊಲೆ ಮಾಡಿದ್ದಾರೆ ಅಂತ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಕೊಲೆ ಮಾಡಿದ್ದು, ಗ್ರಾಮದವರಲ್ಲ, ಬದಲಾಗಿ ಓರ್ವ ವಿವಾಹಿತ ಮಹಿಳೆ ಮತ್ತು ಆಕೆಯ ಸಹಚರರು ಎಂದು ಪೊಲೀಸರಿಗೆ ಪತ್ತೆ ಹಚ್ಚಿದ್ದಾರೆ.

ದಯಾನಂದ್​ಗೆ ಯಾರ ಬಳಿಯೂ ಹಣಕಾಸಿನ ವ್ಯವಹಾರವು ಇರಲಿಲ್ಲ, ಮಾತ್ರವಲ್ಲದೇ ಊರಲ್ಲಿ ಹೆಚ್ಚು ಇರುತ್ತಿರಲಿಲ್ಲ. ಆದರೂ ಕೊಲೆಯಾಗಿದ್ದು ಏಕೆ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಾಗ ಸಿಕ್ಕಿದ್ದು ಕಲಬುರಗಿ ನಗರದ ಬಸವೇಶ್ವರ ಕಾಲೋನಿಯ ನಿವಾಸಿಯಾಗಿರುವ ಅಂಬಿಕಾ ಎಂಬಾಕೆ.

ಯಾದಗಿರಿ ಜಿಲ್ಲೆಯ ಕೊಡೆಕಲ್​ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, ಪ್ರಾಥಮಿಕ ಸುರಕ್ಷಾ ಅಧಿಕಾರಿ ಎಂದು ಕೆಲಸ ಮಾಡುತ್ತಿದ್ದಳು ಈಕೆ. ಒಬ್ಬಳು ಮಗಳ ತಾಯಿ ಕೂಡ. ಈ ಅಂಬಿಕಾ, ಇಪ್ಪತ್ತು ದಿನದ ಹಿಂದಷ್ಟೇ ದಯಾನಂದ್​ನ ನಂಬರ್ ಪಡೆದು, ಮಿಸ್​ ಕಾಲ್​ ಕೊಟ್ಟು ನಂತರ ಸ್ನೇಹ ಬೆಳೆಸಿದ್ದಾಳೆ. ಜೂನ್ 24ರಂದು ದಯಾನಂದ್​ಗೆ ಕಲಬುರಗಿಗೆ ಬರುವಂತೆ ಹೇಳಿದ್ದಳು. ಕಲಬುರಗಿಗೆ ಬಂದಿದ್ದ ದಯಾನಂದ್​ನನ್ನು ತನ್ನ ಸ್ಕೂಟಿ ಮೇಲೆ, ವಾಜಪೇಯಿ ಬಡಾವಣೆ ಬಳಿ ಕರೆದುಕೊಂಡು ಹೋಗಿದ್ದಳು. ಅಲ್ಲಿ ಆಟೋದಲ್ಲಿ ಬಂದಿದ್ದ ಕಲಬುರಗಿ ನಗರದ ಶಹಬಜಾರ್ ನಿವಾಸಿಗಳಾದ ಕೃಷ್ಣಾ, ನೀಲಕಂಠ, ಸುರೇಶ್, ಸಂತೋಷ್ ಅನ್ನೋರ ಮುಂದೆ ದಯಾನಂದ್ ನನ್ನು ನಿಲ್ಲಿಸಿದ್ದಳು. ಅಂಬಿಕಾಳೆ ಸ್ವತಃ ಮುಂದೆ ನಿಂತು, ದಯಾನಂದ್​ನನ್ನು ಕೊಲೆ ಮಾಡಿಸಿರುವುದಾಗಿ ಆರೋಪವಿದೆ.

ಇನ್ನು ಅಂಬಿಕಾ ದಯಾನಂದ್ ನನ್ನು ಕೊಲೆ ಮಾಡಲಿಕ್ಕೆ ಸುಪಾರಿ ಪಡೆದಿದ್ದಳಂತೆ. ಶುಕ್ರವಾಡಿ ಗ್ರಾಮದವನೇ ಅಂಬಿಕಾಳಿಗೆ ಮೂರು ಲಕ್ಷಕ್ಕೆ ಸೂಪಾರಿ ನೀಡಿದ್ದ. ಆತ ಈ ಅಂಬಿಕಾಳ ಪ್ರಿಯಕರ ಸುನೀಲ್ ಎನ್ನುವ ವಿಷಯ ತಿಳಿದುಬಂದಿದೆ.

ಮೂರು ಲಕ್ಷಕ್ಕೆ ಸುಪಾರಿ ಪಡೆದ ಅಂಬಿಕಾ ಮತ್ತು ಆಕೆಯ ಸಹಚರರು ದಯಾನಂದ್​ನ ಕೊಲೆ ಮಾಡಿ ಅದರ ವಿಡಿಯೋ ಮಾಡಿದ್ದಾರೆ. ವಿಡಿಯೋ ಮಾಡಿದ ಬಳಿಕ ಮಿಲಿಟರಿಯಲ್ಲಿರುವ ಸುನೀಲ್​ಗೆ ಕಳಿಸಿದ್ದಾಳೆ. ಕೊಲೆಯ ಲೈವ್ ವಿಡಿಯೋ ಮಾಡಿ ತಾನು‌ ಬಚಾವ್ ಆಗೋದಕ್ಕೆ ಪ್ಲ್ಯಾನ್ ಮಾಡಿದ್ದಳು.

ಆದರೆ ತಾನೆ ತೋಡಿದ ಖೆಡ್ಡಾಗೆ ತಾನೆ ಬಿದ್ದಿದ್ದಾಳೆ ಖತರ್ನಾಕ್ ಲೇಡಿ ಅಂಬಿಕಾ. ವಿಡಿಯೋ ಬೆನ್ನತ್ತಿ ಹೋದ ಪೊಲೀಸರಿಗೆ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆ ಪ್ರಕರಣದಲ್ಲಿ ಏಳು ಜನ ಆರೋಪಿಗಳನ್ನು ಬಂಧಿಸಲಾಗಿದೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆ ನಡೆಯುತ್ತಿದೆ. (ದಿಗ್ವಿಜಯ ನ್ಯೂಸ್​)