ಚಿತ್ರದುರ್ಗ: ಲಂಚ ಕೊಟ್ಟರಷ್ಟೇ ನೌಕರಿ ಎನ್ನುವುದು ಬಹುತೇಕ ಇಲಾಖೆಗಳಲ್ಲಿ ಮಾಮೂಲಾಗಿರುವ ಕಾರಣ, ಇದನ್ನೇ ಬಂಡವಾಳ ಮಾಡಿಕೊಂಡಿರುವ ದೊಡ್ಡ ವಂಚಕರ ಜಾಲ ಉದ್ಯೋಗಾಕಾಂಕ್ಷಿಗಳಿಂದ ಹಣ ವಸೂಲಿ ಮಾಡಿ ಮೋಸ ಮಾಡುತ್ತಿರುವ ಘಟನೆಗಳು ಇತ್ತೀಚೆಗೆ ಬಹಳವಾಗಿ ನಡೆಯುತ್ತಿದೆ.
ಕೆಎಸ್‌ಆರ್‌ಟಿಸಿಯಲ್ಲಿ ಕೆಲಸ ಕೊಡಿಸುವುದಾಗಿ ಕೋಟಿಗಟ್ಟಲೆ ಹಣವನ್ನು ಹಲವಾರು ಮಂದಿಯಿಂದ ವಸೂಲಿ ಮಾಡಿದ್ದ ಬೆಂಗಳೂರಿನ ಗ್ಯಾಂಗ್ ಒಂದನ್ನು ಕೆಲ ದಿನಗಳ ಹಿಂದಷ್ಟೇ ಪೊಲೀಸರು ಬಂಧಿಸಿದ್ದರು. ಅದರ ಬೆನ್ನಲ್ಲೇ ಇದೇ ಮಾದರಿಯ ಇನ್ನೊಂದು ಗ್ಯಾಂಗ್ ಅನ್ನು ಚಿತ್ರದುರ್ಗದಲ್ಲಿ ಅರೆಸ್ಟ್ ಮಾಡಲಾಗಿದೆ.
ಕೆಎಸ್ಆರ್‌ಸಿಟಿಯಲ್ಲಿ ಸಂಚಾರಿ, ಸಹಾಯಕ ಸಂಚಾರಿ ನಿರೀಕ್ಷಕ ಹುದ್ದೆಗಳ ಕರೆಯಲಾಗಿತ್ತು. ಈ ಹುದ್ದೆಯ ಆಸೆಗೆ ಬಿದ್ದು ಹಲವಾರು ಮಂದಿ ಲಕ್ಷಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ. ಈ ಹುದ್ದೆಯನ್ನು ತಾವು ಕೊಡಿಸುವುದಾಗಿ 500ಕ್ಕೂ ಹೆಚ್ಚು ಮಂದಿಗೆ ಇವರು ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.
ಬಾಗಲಕೋಟೆ ಜಿಲ್ಲೆಯ ಮಹಮ್ಮದ್ ಸಾಬ್ ಅಲ್ಲಾಸಾಬ್ ಭಗವಾನ್, ವೀರಭದ್ರಪ್ಪ ಸೋಮಲಿಂಗಪ್ಪ, ವಿಜಯಪುರ ಜಿಲ್ಲೆಯ ಬಸವರಾಜ್, ಮಂಜುನಾಥ್, ಬೆಂಗಳೂರಿನ ಅನಿಲ್ ಕುಮಾರ್ ಎಂಬುವವರು ಸದ್ಯ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಅಭಿಷೇಕ್ ಎಂಬ ವ್ಯಕ್ತಿ ಮೋಸ ಹೋಗಿ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದರಿಂದ ಘಟನೆ ಬೆಳಕಿಗೆ ಬಂದಿದೆ. 70 ಲಕ್ಷ ಹಣ ಪಡೆದು ನಕಲಿ ನೇಮಕಾತಿ ಆದೇಶ ನೀಡಿದ್ದರು ಈ ವಂಚಕರು.
ವಂಚನೆ ಹೇಗೆ? ಈ ವಂಚಕರು ನಕಲಿ ದಾಖಲೆಯನ್ನು ಸೃಷ್ಟಿಸಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯುತ್ತಿದ್ದರು. ಹಗರಿಬೊಮ್ಮನಹಳ್ಳಿ ತಾಲೂಕಿನ ಮಾನ್ವಿ ಡ್ಯಾಂ ಹತ್ತಿರದ ಕೆಎಸ್ಆರ್ಟಿಸಿ ತರಬೇತಿ ಕೇಂದ್ರದ ಮುಂಭಾಗ ಹಾಗೂ ಹಗರಿಬೊಮ್ಮನಹಳ್ಳಿ ಪ್ರವಾಸಿ ಮಂದಿರದಲ್ಲಿ ಅಭ್ಯರ್ಥಿ ಸಂದರ್ಶನ ನಡೆಸುತ್ತಿದ್ದರು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೆಡಿಕಲ್ ಮಾಡಿಸಿ ನಕಲಿ ನೇಮಕಾತಿ ಅದೇಶ ಪತ್ರ ನೀಡುತ್ತಿದ್ದರು. ಈ ಸಮಯದಲ್ಲಿ ಅಭ್ಯರ್ಥಿಗಳಿಂದ ಹಲವಾರು ಲಕ್ಷ ರೂಪಾಯಿ ಪಡೆಯುತ್ತಿದ್ದರು. ಕೆಲಸ ಸಿಕ್ಕೇ ಬಿಟ್ಟಿತು ಎಂದು ಖುಷಿಯಲ್ಲಿ ಅಭ್ಯರ್ಥಿಗಳು ನೇಮಕಾತಿ ಪತ್ರ ಹಿಡಿದು ಕೆಲಸಕ್ಕೆ ಸೇರಲು ಹೋದಾಗ ಅದು ನಕಲಿ ಎಂಬುದು ತಿಳಿದಿದೆ. ತನಿಖೆ ಮುಂದುವರೆದಿದೆ.