ಜಿಲ್ಲೆ

‘ಹಿಜಾಬ್‌ ಹಾಕದಿದ್ರೆ ಬ್ಯೂಟಿ ಬೇರೆಯವರ ಕಣ್ಣಿಗೆ ಕಾಣಿಸ್ತದಲ್ಲ... ಅದಕ್ಕೇ ಅತ್ಯಾಚಾರ ಜಾಸ್ತಿಯಾಗ್ತಿರೋದು...’

ಧಾರವಾಡ: ಇಸ್ಲಾಂನಲ್ಲಿ ಹಿಜಾಬ್ ಎಂದರೆ ಪರ್ದಾ ಎಂದರ್ಥ. ಹಿಜಾಬ್‌ ಹಾಕದಿದ್ರೆ ಬ್ಯೂಟಿ ಬೇರೆಯವರ ಕಣ್ಣಿಗೆ ಕಾಣಿಸ್ತದಲ್ಲ... ಅದಕ್ಕೇ ಅತ್ಯಾಚಾರ ಜಾಸ್ತಿಯಾಗ್ತಿರೋದು ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.

ಧಾರವಾಡದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಭಾರತದಲ್ಲಿ ರೇಪ್ ರೇಟ್ ಹೆಚ್ಚಾಗಿದೆ. ಹಿಜಾಬ್ ಹಾಕಿಕೊಂಡರೇ ಅತ್ಯಾಚಾರ ಕಡಿಮೆ ಆಗುತ್ತದೆ. ಹಿಜಾಬ್ ಹಾಕಿಕೊಳ್ಳೋದೇ ಅವರ ಬ್ಯೂಟಿ ಕಾಣಬಾರದು, ಮತ್ತೊಬ್ಬರ ಕಣ್ಣು ಬೀಳಬಾರದು ಎಂದು. ಹಿಜಾಬ್ ಹಾಕಿಕೊಳ್ಳೋದು ಸೆಫ್ಟಿ ಅನ್ನೋ ಅರ್ಥದಲ್ಲಿ ಹೇಳುತ್ತಿದ್ದೇವೆ ಎಂದರು.

ದೇಶದಲ್ಲಿ ಅತ್ಯಾಚಾರ ಪ್ರಮಾಣ ಏಕೆ ಹೆಚ್ಚಾಗಿದೆ ಏಕೆಂದರೆ ಹೆಣ್ಣು ಮಕ್ಕಳು ಪರದೆಯ ಹಿಂದೆ ಇಲ್ಲ. ಹೀಗಾಗಿ, ಮಹಿಳೆಯರು ತಮ್ಮ ಸೌಂದರ್ಯ ಮರೆಮಾಚಲು ಹಿಜಾಬ್ ಧರಿಸಬೇಕು ಎಂದು ಜಮೀರ್ ಹೇಳಿದರು. ಹಿಜಾಬ್ ಧಾರಣೆ ಕಡ್ಡಾಯವೇನೂ ಅಲ್ಲ. ಆದರೆ, ಯಾರಿಗೆ ತಮ್ಮ ಸೌಂದರ್ಯ ರಕ್ಷಣೆ ಮಾಡಿಕೊಳ್ಳಬೇಕು ಎಂಬ ಮನಸ್ಸಿರುತ್ತದೋ ಅವರು ಹಿಜಾಬ್ ಧರಿಸುತ್ತಾರೆ. ಅದು ಮುಸ್ಲಿಂ ಮಹಿಳೆಯರ ಹಕ್ಕು. ನೂರಾರು ವರ್ಷದಿಂದ ಪಾಲಿಸಿಕೊಂಡು ಬಂದಿದ್ದೇವೆ. ಹಿಜಾಬ್ ವಿವಾದ ಆರಂಭವಾದ ವೇಳೆ ಸರ್ಕಾರ ಅದನ್ನು ಸರಳವಾಗಿ ತೆಗೆದುಕೊಂಡಿದ್ದರೆ ಇಷ್ಟು ಸಮಸ್ಯೆ ಆಗುತ್ತಿರಲಿಲ್ಲ ಎಂದು ಜಮೀರ್‌ ಹೇಳಿದರು.

ಮುಸ್ಲಿಂರಲ್ಲಿಯೂ ಬಹಳಷ್ಟು ಜನ ಹಿಜಾಬ್ ಹಾಕುತ್ತಿಲ್ಲ. ಐದು ಸಲ ನಮಾಜ್ ಮಾಡಬೇಕು ಅಂತಿದೆ. ಮಾಡುವವರು ಮಾಡುತ್ತಾರೆ, ಮಾಡದವರು ಮಾಡೋದಿಲ್ಲ. ಈಗ ಹಿಜಾಬ್ ಇಸ್ಲಾಂ ಧರ್ಮದಲ್ಲಿ ಹಾಕಬೇಕು ಅಂತಿದೆ. ಬ್ಯೂಟಿ ಕಾಣಬಾರದು ಅಂತ ಹಾಕಬೇಕು ಅಂತಿದೆ. ಹಾಕುವವರು ಹಾಕಬಹುದು, ಹಾಕದೇ ಇರೋರು ಬಿಡಬಹುದು ಎಂದು ಹೇಳಿದರು.