ಧಾರವಾಡ: ಒಂದೆಡೆ ಸುಪ್ರೀಂಕೋರ್ಟ್ನಲ್ಲಿ ಬೆಂಗಳೂರಿನ ಚಾಮರಾಜನಗರದ ಈದ್ಗಾ ಮೈದಾನದಲ್ಲಿ ಗಣೇಶನನ್ನು ಕುಳ್ಳರಿಸಬೇಕೇ ಬೇಡವೇ ಎಂಬ ಕುರಿತು ವಿಚಾರಣೆ ನಡೆಯುತ್ತಿದ್ದೆ, ಇತ್ತ ಕರ್ನಾಟಕ ಹೈಕೋರ್ಟ್ನ ಧಾರವಾಡ ಪೀಠವು, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಪರೋಕ್ಷವಾಗಿ ಅನುಮತಿಯನ್ನು ನೀಡಿದೆ. ಗಣೇಶನನ್ನು ಕುಳ್ಳರಿಸುವ ಬಗ್ಗೆ ನಿರ್ಧರಿಸುವ ಅಧಿಕಾರ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ಇರುವುದಾಗಿ ಕೋರ್ಟ್ ಹೇಳಿದೆ. ಆಯುಕ್ತರು ಗಣೇಶೋತ್ಸವಕ್ಕೆ ಇದಾಗಲೇ ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದಂತಾಗಿದೆ.
ಮೈದಾನದಲ್ಲಿ ಗಣೇಶ ಕೂರಿಸುವುದು ಈಗ ಪಾಲಿಕೆ ಆಯುಕ್ತರಿಗೆ ಬಿಟ್ಟ ವಿಚಾರ ಎಂದಿರುವ ಕೋರ್ಟ್, ಗಣೇಶೋತ್ಸವಕ್ಕೆ ಬರುವ ಅರ್ಜಿ ನಿರ್ಧರಿಸುವ ಅಧಿಕಾರವನ್ನು ಕಮಿಷನರ್ಗೆ ನೀಡಿ ಆದೇಶಿಸಿದೆ.
ಸದನ ಸಮಿತಿ ವರದಿ ಮೇರೆಗೆ ನಿನ್ನೆ (ಸೋಮವಾರ) ಮಹಾನಗರ ಪಾಲಿಕೆಯು ಮೂರು ದಿನ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿತ್ತು. ಪಾಲಿಕೆ ಮೇಯರ್ ಗಣೇಶ ಪ್ರತಿಷ್ಠಾಪನೆಗೆ 5 ಜನರ ಸಮಿತಿ ರಚಿಸಿದ್ದರು. ಈ ಹಿನ್ನೆಲೆ ಸದನ ಸಮಿತಿ ರಚನೆ ಪ್ರಶ್ನಿಸಿ ಹುಬ್ಬಳ್ಳಿಯ ಅಂಜುಮನ್ ಇಸ್ಲಾಂ ಸಂಸ್ಥೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ನಡೆಸಿದರು.
ಪಾಲಿಕೆಯ ಆಸ್ತಿಯನ್ನು ತಾತ್ಕಾಲಿಕವಾಗಿ ನೀಡುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯಿದೆ 1976 ಸೆಕ್ಷನ್ 176ರ ಅಡಿ ಸಂಬಂಧಿತ ಅರ್ಜಿಗಳನ್ನು ವಿಲೇವಾರಿ ಮಾಡಲು ಆಯುಕ್ತರು ಅಧಿಕಾರ ಚಲಾಯಿಸಬಹುದಾಗಿದೆ. ಕಾರ್ಪೊರೇಶನ್ ಮೈದಾನದಲ್ಲಿ, ಅಂತ್ಯ ಸಂಸ್ಕಾರ ಪ್ರದೇಶದಲ್ಲಿ ಯಾರೂ ಶಾಶ್ವತ ಪುತ್ಥಳಿ ನಿರ್ಮಿಸುವಂತಿಲ್ಲ. ಮೈದಾನವು ಮುಕ್ತ ಪ್ರದೇಶವಾಗಿದ್ದು, ಈಗಾಗಲೇ ಮೈದಾನ ಬಳಕೆಗೆ ಆಯುಕ್ತರಿಗೆ ಮನವಿಗಳು ಸಲ್ಲಿಕೆಯಾಗಿದ್ದು, ಕಾನೂನಿನ ಅನ್ವಯ ಅರ್ಜಿಗಳನ್ನು ವಿಲೇವಾರಿ ಮಾಡುವ ಸ್ವಾತಂತ್ರ್ಯ ಆಯುಕ್ತರಿಗೆ ಇದೆ ಎಂದು ಕೋರ್ಟ್ ತೀರ್ಪಿನಲ್ಲಿ ಹೇಳಿದೆ.
ಈ ತೀರ್ಪಿನ ಹಿನ್ನೆಲೆಯಲ್ಲಿ ಈದ್ಗಾ ಮೈದಾನದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಮೈದಾನದೊಳಗೆ ಸಾರ್ವಜನಿಕರಿಗೆ ನಿಷೇಧ ವಿಧಿಸಲಾಗಿದೆ. ಈದ್ಗಾ ಮೈದಾನವನ್ನು ಇಬ್ಭಾಗವಾಗಿಸಿದ್ದಾರೆ ಪೊಲೀಸರು. ಮೈದಾನದ ಮಧ್ಯೆ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ಮೈದಾನದ ಒಂದು ಬದಿ ಈದ್ಗಾ ಮತ್ತೊಂದು ಬದಿ ಗಣೇಶ ಪ್ರತಿಷ್ಠಾಪನೆ ಮಾಡಲಾಗುವುದು. (ದಿಗ್ವಿಜಯ ನ್ಯೂಸ್)