ಜಿಲ್ಲೆ

ಸರಣಿ ಚುನಾವಣೆಗೆ ನಾವ್​ ರೆಡಿ- ವರ್ಷ ಮೊದಲೇ ಅಭ್ಯರ್ಥಿ ಘೋಷಣೆ, ನನಗೇನೂ ಅಧಿಕಾರದ ಆಸೆಯಿಲ್ಲ ಎಂದ ಎಚ್​ಡಿಕೆ

suchetana

ಬೆಂಗಳೂರು: ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದೇ ನಮ್ಮ ಗುರಿ. ಹಾಗಾಗಿ ಜನವರಿ 15ರೊಳಗೆ ಕನಿಷ್ಠ 150 ಅಭ್ಯರ್ಥಿಗಳನ್ನ ಘೋಷಣೆ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಜೆ.ಪಿ.ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಚುನಾವಣೆಗೆ ಪಕ್ಷ ಸಂಘಟನೆ ಮಾಡುವುದು ನಮ್ಮ ಗುರಿ. ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದೇನೆ. ಕರೊನಾ ಸಂಪೂರ್ಣವಾಗಿ ಕಡಿಮೆಯಾಗಬೇಕಿದೆ. ಹಾಗಾಗಿ ಆಷಾಢ ಮಾಸದ ನಂತರ ಪ್ರವಾಸ ಮಾಡುತ್ತೇನೆ ಎಂದರು. ಪ್ರವಾಸದ ವೇಳೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ತಿಳಿಸಲಿದ್ದೇವೆ.

ಒಂದು ವಾರಗಳ ಕಾಲ ಪಕ್ಷದ ಜಿಲ್ಲಾವಾರು ಸಂಘಟನೆ ಸಭೆ ಕರೆದಿದ್ದೇನೆ. ಮುಂದಿನ ಐದು ದಿನಗಳ ಕಾಲ ಸಂಘಟನೆ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿಸಿದರು. ತಾಲ್ಲೂಕು, ಜಿಲ್ಲಾ ಪಂಚಾಯಿತಿ, ಮುಂದಿನ ವಿಧಾನಸಭೆ ಚುನಾವಣೆ ಬಗ್ಗೆ ಚರ್ಚಿಸಲಿದ್ದೇವೆ ಎಂದು ಹೇಳಿದರು. ಕಾಂಗ್ರೆಸ್ ಪರಿಸ್ಥಿತಿ, ಬಿಜೆಪಿ ಅಧಿಕಾರ ಎಲ್ಲವನ್ನೂ ಜನತೆ ನೋಡಿದ್ದಾರೆ. ಜನತಾದಳ ಅಧಿಕಾರದಲ್ಲಿದ್ದಾಗ ಮಾತ್ರ ಅಭಿವೃದ್ಧಿ ಆಗಿದೆ. ನಾನು ಸಿಎಂ ಆಗಿದ್ದಾಗ ಯಾವ ಯೋಜನೆಗೆ ಚಾಲನೆ ನೀಡಿದ್ದೆನೋ, ಅದನ್ನೇ ಈಗ ಮುಂದುವರೆಸುತ್ತಿದ್ದಾರೆ ಎಂದರು.

ಉಸ್ತುವಾರಿಗಳಿಂದ ಲೂಟಿ: ರಾಷ್ಟ್ರೀಯ ಪಕ್ಷ ನಡೆಸಬೇಕಾದರೆ ದೆಹಲಿಯಿಂದ ಇಲ್ಲಿಗೆ ಉಸ್ತುವಾರಿಯನ್ನು ಕಳುಹಿಸುತ್ತಾರೆ. ಬಿಜೆಪಿ, ಕಾಂಗ್ರೆಸ್‌‌ನಿಂದ ಉಸ್ತುವಾರಿ ಬರುತ್ತಾರೆ. ಅವರು ರಾಜ್ಯಕ್ಕೆ ಬರುವ ಉದ್ದೇಶವಾದರೂ ಏನು.? ಕರ್ನಾಟಕ ರಾಜ್ಯ ಸಂಪದ್ಭರಿತ ರಾಜ್ಯ. ಇಲ್ಲಿರುವ ಸಂಪತ್ತು ಲೂಟಿ ಮಾಡಲು ಬರುತ್ತಾರೆ ಎಂದು ಟೀಕಿಸಿದರು. ಇಲ್ಲಿರುವ ಸಂಪತ್ತನ್ನು ಚುನಾವಣೆ ನಡೆಸುವ ಸ್ಥಳಗಳಿಗೆ ಕಳಿಸುವುದಷ್ಟೇ ಉಸ್ತುವಾರಿಗಳ ಕೆಲಸ ಎಂದು ಆರೋಪಿಸಿದರು. ನಾನು ಕೃಷಿಯಲ್ಲಿ ತೊಡಗಿಕೊಂಡಿದ್ದರೂ, ಪಕ್ಷ ಸಂಘಟನೆ ಮಾಡುವಲ್ಲಿ ಹಿಂದೆ ಬಿದ್ದಿಲ್ಲ. ಹೊಸದೊಂದು ಬದಲಾವಣೆಗೆ ಪ್ರಾದೇಶಿಕ ಪಕ್ಷದ ಪಾತ್ರದ ಅವಶ್ಯಕತೆ ಬಗ್ಗೆ ಜನರಿಗೆ ತಿಳಿಸುತ್ತೇನೆ ಎಂದರು.

ಜನರಿಗೆ ಟೋಪಿ ಹಾಕಿದ್ದಾರೆ: ಜಲಮಿಷನ್ ಯೋಜನೆ ಬಗ್ಗೆ ತಿಳಿಸಲು ಕೇಂದ್ರ ಸಚಿವರು ರಾಜ್ಯಕ್ಕೆ ಬಂದಿದ್ದರು. ಆದರೆ, ಕೇಂದ್ರ ಸಚಿವರ ಸಭೆಗೆ ಈಶ್ವರಪ್ಪ ಹೋಗುವುದೇ ಇಲ್ಲ. 99 ಲಕ್ಷ ಕುಟುಂಬಕ್ಕೆ ನೀರು ಪೂರೈಸುವ ಬಗ್ಗೆ ಹೇಳಿದ್ದರು. ಅವರು ನೀರಾವರಿ ವಿಚಾರವಾಗಿ ಚರ್ಚೆ ಮಾಡಲು ಬಂದಿಲ್ಲ. ಮಹದಾಯಿ, ಮೇಕೇದಾಟು ವಿಚಾರ ಸಮಗ್ರವಾಗಿ ಚರ್ಚೆ ನಡೆಸಿಲ್ಲಅವರು ಟೋಪಿ ಹಾಕಿದ್ದಾರೆ ಎಂದು ಟೀಕಿಸಿದರು.

ಎಲ್ಲ ಪಕ್ಷಗಳು ಅಧಿಕಾರಕ್ಕೆ ಬರುವುದಾಗಿ ಹೇಳುತ್ತಿವೆ. ಯಡಿಯೂರಪ್ಪ ಅವರು ಹೇಳಿದ್ದಾರೆ. ಸಿದ್ದರಾಮಯ್ಯ ಕನಸು ಕಾಣುತ್ತಿದ್ದಾರೆ: ಸಿದ್ದರಾಮಯ್ಯಚುನಾವಣೆಗೆ ನಿಲ್ಲೋದಿಲ್ಲ ಎಂದು ಹೇಳಿದ್ದರು. ಈಗ ಅವರು ಕನಸು ಕಾಣ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ನವರು ದುಡಿಮೆ ಮಾಡುವುದಿಲ್ಲ. ಆದರೂ ನಾನೇ ಸಿಎಂ ಎಂದು ಹೇಳಿಕೊಂಡು ಒಬ್ಬೊಬ್ಬರ ಹೆಸರು ಸೇರಿಸುತ್ತಾ ಬಂದಿದ್ದಾರೆ. ನನಗೆ ಯಾವುದೇ ಅಧಿಕಾರದ ಆಸೆ ಇಲ್ಲ, ಎಲ್ಲವನ್ನೂ ಜನತೆಯ ತೀರ್ಮಾನಕ್ಕೆ ಬಿಡುತ್ತೇನೆ ಎಂದರು.

ಅಯ್ಯೋ ಅದೆಲ್ಲ ಬೇಡ ಬಿಡಿ: ಕೆಆರ್‌ಎಸ್ ಡ್ಯಾಂ ಬಿರುಕು ಸಂಬಂಧ ಸುಮಲತಾ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಕುಮಾರಸ್ವಾಮಿ, ಅಯ್ಯೋ.. ಅದೆಲ್ಲಾ ಬೇಡ ಬಿಡಿ. ಆ ಟೆಕ್ನಿಕಲ್ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಎಂದು ಕೋಪದಲ್ಲೇ ಹೇಳಿ ಹೊರಟು ಹೋದರು.