ಬೆಂಗಳೂರು: ಮಂತ್ರಿ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಸುಶೀಲ್ ಪಾಂಡುರಂಗ ಮಂತ್ರಿ ಮತ್ತು ಅವರ ಪುತ್ರ ಪ್ರತೀಕ್ ಮಂತ್ರಿ ವಿರುದ್ಧ ಅಪರಾಧ ತನಿಖಾ ದಳ (ಸಿಐಡಿ) ನಡೆಸುತ್ತಿರುವ ಎಲ್ಲಾ ಪ್ರಕ್ರಿಯೆಗೆ ಹೈಕೋರ್ಟ್ ತಡೆ ನೀಡಿದೆ.
ಗ್ರಾಹಕರಿಗೆ ವಂಚಿಸಿದ ಆರೋಪದಲ್ಲಿ ಇವರು ಬಂಧಿತರಾಗಿದ್ದು, ತನಿಖೆಯ ತಡೆಗೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಅದನ್ನು ಕೋರ್ಟ್ ಮಾನ್ಯ ಮಾಡಿದೆ. ಈ ಆದೇಶದ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್ ಮತ್ತು ನ್ಯಾಯಾಲಯದಲ್ಲಿ ಆರೋಪ ಸಂಬಂಧ ನಡೆಯುತ್ತಿರುವ ವಿಚಾರಣೆಗೆ ತಡೆ ಸಿಕ್ಕಂತಾಗಿದೆ.
'ನೋಟಿಸ್ ಜಾರಿ ಮಾಡದೆ ಸಿಐಡಿ ಪೊಲೀಸರು ಸೆ. 9ರಂದು ಅರ್ಜಿದಾರರನ್ನು ಕಾನೂನು ಬಾಹಿರವಾಗಿ ಬಂಧಿಸಿದ್ದಾರೆ. ಈ ಹಿಂದೆ ಕೂಡ ಇಂಥದ್ದೇ ಪ್ರಕರಣದಲ್ಲಿ ಕೋರ್ಟ್ ಇವರ ವಿರುದ್ಧ ನಡೆಯುತ್ತಿರುವ ತನಿಖೆಗೆ ತಡೆ ನೀಡಿತ್ತು' ಎಂದು ಆರೋಪಿಗಳ ಪರ ಹಿರಿಯ ವಕೀಲ ಶ್ಯಾಮಸುಂದರ್ ವಾದಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಈ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ವಿವಿಧೆಡೆ ಅತಿ ದೊಡ್ಡ ರಿಯಲ್ ಎಸ್ಟೇಟ್ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಮಂತ್ರಿ ಡೆವಲಪರ್ಸ್ ವಿರುದ್ಧ ಹೂಡಿಕೆದಾರರಿಗೆ ವಂಚಿಸಿದ ಆರೋಪದಡಿ 2019ರ ಜುಲೈನಲ್ಲಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಏಳೆಂಟು ಪ್ರಕರಣ ದಾಖಲಾಗಿದ್ದವು. 2021ರ ಜೂನ್ 26ರಂದು ಮಂತ್ರಿ ಗ್ರೂಪ್ ಮೇಲೆ ದಾಳಿ ನಡೆಸಿದ್ದ ಐಟಿ ಅನೇಕ ದಾಖಲೆಗಳನ್ನು ವಶಕ್ಕೆ ಪಡೆದಿತ್ತು.
2020ರ ಆಗಸ್ಟ್ 29ರಂದು ಅನಿಲ್ ಕುಮಾರ್ ಎಂಬುವವರು ನೀಡಿದ ದೂರನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ಈ ಸಂಬಂಧ ಭಾರತೀಯ ದಂಡ ಸಂಹಿತೆಯ 120ಬಿ, 406, 409, 420 ಜೊತೆಗೆ 34 ಹಾಗೂ ಅನಿಯಂತ್ರಿತ ಠೇವಣಿ ಯೋಜನೆಯ (BUDS) ವಿವಿಧ ಸೆಕ್ಷನ್‌ಗಳ ಅಡಿ ಸುಶೀಲ್ ಮಂತ್ರಿ ಮತ್ತಿತರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. (ಏಜೆನ್ಸೀಸ್)