ವಿಜಯವಾಣಿ ಸುದ್ದಿಜಾಲ ಉಡುಪಿ
ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರವು ಸಂಜೀವಿನಿ ಜೀವ ವಿಮಾ ಸೌಲಭ್ಯ ಒದಗಿಸಿದ್ದು, ಆ ಸೌಕರ್ಯವನ್ನು ನಿವೃತ್ತ ನೌಕರರಿಗೂ ಸಹ ಕೊಡಬೇಕು. ಅಲ್ಲದೆ, 80 ವರ್ಷದ ಬದಲಾಗಿ 70 ವರ್ಷ ದಾಟಿರುವ ನಿವೃತ್ತ ನೌಕರರಿಗೆ ಹೆಚ್ಚುವರಿಯಾಗಿ ಶೇ.10 ಪಿಂಚಣಿ ಸೌಲಭ್ಯ ನೀಡಬೇಕು ಎಂದು ಉಡುಪಿ ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಎಸ್. ಹರಿಕೃಷ್ಣ ಶಿವತ್ತಾಯ ಒತ್ತಾಯಿಸಿದರು.
ಉಡುಪಿಯ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ಸೋಮವಾರ (ಅ.13) ಆಯೋಜಿಸಿದ್ದ ಸಂಘದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ 2025-26ನೇ ಸಾಲಿನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದ ಬಳಿಕ ಮಾತನಾಡಿದರು.
ಸಂಘದ ಉಪಾಧ್ಯಕ್ಷರಾಗಿ ಆನಂದ ಗಾಣಿಗ, ಪ್ರಧಾನ ಕಾರ್ಯದರ್ಶಿಯಾಗಿ ಶೇಖರ ನಾಯ್ಕ, ಸಹ ಕಾರ್ಯದರ್ಶಿಗಳಾಗಿ ಶಿವಣ್ಣ ಅಂಚನ್, ರಾಮ್ ಭಟ್, ಕೋಶಾಧಿಕಾರಿಯಾಗಿ ಡಿ.ಚಂದ್ರಶೇಖರ, ಸಂಘಟನಾ ಕಾರ್ಯದರ್ಶಿಯಾಗಿ ವೀಣಾ ರಾವ್ ಆಯ್ಕೆಯಾದರು.
ಕಳೆದ 12 ವರ್ಷದಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ನಾರಾಯಣ ಭಟ್ ಅವರನ್ನು ಗೌರವಾಧ್ಯಕ್ಷರಾಗಿ ಹಾಗೂ ಕಳೆದ ಅವಧಿಯಲ್ಲಿ ಕೋಶಾಧಿಕಾರಿಯಾಗಿದ್ದ ಸುಂದರ್ ಪ್ರಭು ಅವರನ್ನು ಗೌರವ ಸಲಹೆಗಾರರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನೂತನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸುಬ್ರಹ್ಮಣ್ಯ ಶೇರಿಗಾರ್, ಕೆ.ಮುರಳೀಧರ ಆಚಾರ್, ಪಾಂಡು ಎಂ. ಶೆಟ್ಟಿ, ರತ್ನಾಕರ ಜೆ. ಕಿಣಿ, ವಿಶ್ವನಾಥ ಯು., ವಾಸು ಆಚಾರ್, ಸರಸ್ವತಿ, ಎಚ್.ಶಕುಂತಲಾ ಹೆಗ್ಡೆ, ರಘುರಾಮ್ ಶೆಟ್ಟಿ ನೇಮಕಗೊಂಡರು. ನಿವೃತ್ತ ತಹಸೀಲ್ದಾರ್ ಕೆ.ಮುರಳೀಧರ ಆಚಾರ್ಯ ಚುನಾವಣಾಧಿಕಾರಿಯಾಗಿ ಸಹಕರಿಸಿದರು.