ಜಿಲ್ಲೆ

ಅಕ್ಕಿ, ಕೋಳಿ, ಕುರಿ ಕೊಟ್ಟು ದೀನದಲಿತರನ್ನು ದೈನೇಸಿ ಸ್ಥಿತಿಯಲ್ಲಿಟ್ಟ ಕಾಂಗ್ರೆಸ್- ಸಚಿವ ಕಿಡಿ

ಬೆಂಗಳೂರು: ಪುಕ್ಕಟೆ ಅಕ್ಕಿ, ಕುರಿ, ಕೋಳಿ ಕೊಟ್ಟು ದೀರ್ಘಾವಧಿ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ, ದೀನದಲಿತರನ್ನು ದೈನೇಸಿ ಸ್ಥಿತಿಯಲ್ಲಿರಿಸಿತು. ಅಸ್ಪೃಶ್ಯತೆ ಹೋಗಲಾಡಿಸುವಲ್ಲಿ ವಿಫಲವಾಯಿತು ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಿಡಿಕಾರಿದರು.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಎಸ್ಸಿ ಮೋರ್ಚಾ ಶುಕ್ರವಾರ ಆಯೋಜಿಸಿದ್ದ ಸಂವಿಧಾನ ದಿನ ಹಾಗೂ ಸಂವಿಧಾನ ಗೌರವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಾತಿಗಳು ಹಾಗೂ ಧರ್ಮಗಳ ಮಧ್ಯೆ‌ ಕಿಚ್ಚು‌ಹಚ್ಚಿ ದಲಿತರು ಹಾಗೂ ಅಲ್ಪಸಂಖ್ಯಾತರನ್ನು ಭಯದಲ್ಲಿಟ್ಟು ಓಟ್ ಬ್ಯಾಂಕ್ ನಂತೆ‌ ಬಳಸಿಕೊಂಡಿತು ಎಂದು ದೂಷಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಆಶಯದಂತೆ ದೀನ-ದಲಿತರು‌ ಶಿಕ್ಷಣ ನೀಡಿ, ಅರಿವು‌ ಮೂಡಿಸಲು ಪ್ರಯತ್ನಿಸಲಿಲ್ಲ. ಹಾಗೆ ಮಾಡಿದರೆ ತಮ್ಮಿಂದ ದೂರವಾಗಿ ಅಧಿಕಾರ ಕೈತಪ್ಪುತ್ತದೆ ಎಂಬ ಭೀತಿ ಕಾಂಗ್ರೆಸ್ ನಲ್ಲಿತ್ತು ಎಂದರು.

ಕ್ರಮೇಣ ದಲಿತರು ಹಾಗೂ ಅಲ್ಪಸಂಖ್ಯಾತರು ವಿದ್ಯಾವಂತರು, ಪ್ರಜ್ಞಾವಂತರಾಗಿ ದೂರ ಸರಿದ ಪರಿಣಾಮ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ದಲಿತ ಮುಖಂಡರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ ಹೇಳಿಕೆಯು ಹತಾಶೆ, ಅಧಿಕಾರದ ಹಪಾಹಪಿ ಎತ್ತಿ ತೋರಿಸುತ್ತದೆ ಎಂದು ಗೋವಿಂದ ಕಾರಜೋಳ ತಿವಿದರು.

ಪಕ್ಷದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಕಾರ್ಯದರ್ಶಿ ಜಗದೀಶ್ ಹಿರೇಮನಿ, ಕೋಲಾರ ಸಂಸದ ಮುನಿಸ್ವಾಮಿ, ಎಸ್ಸಿ‌ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಇದ್ದರು.