ಜಿಲ್ಲೆ

ಅಡಕೆಗೆ ಎಲೆಚುಕ್ಕೆ ರೋಗ: ಸರ್ಕಾರದಿಂದ ರೈತರಿಗೆ ಉಚಿತ ಔಷಧ, ಸಲಕರಣೆಗೆ ಸಹಾಯಧನ

ಬೆಂಗಳೂರು: ಮಲೆನಾಡಿನ ಅಡಕೆ ಬೆಳೆಗಾರರಿಗೆ ಈಗ ಎಲೆಚುಕ್ಕೆ ರೋಗದ ಕಾಟ ಶುರುವಾಗಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದ್ದು, ರೈತರಿಗೆ ಉಚಿತ ಔಷಧಿ ಪೂರೈಕೆ ಹಾಗೂ ಸಲಕರಣೆ ಪಡೆಯಲು ಸಹಾಯಧನ ಮಾಡುವುದಾಗಿ ಘೋಷಿಸಿದೆ.

ಈ ಕುರಿತು ತೋಟಗಾರಿಕಾ ಸಚಿವ ಮುನಿರತ್ನ, ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್ ಅಂಗಾರ ಅವರು ಜಂಟಿ ಪತ್ರಿಕಾ ಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಮಲೆನಾಡಿನ ಕೆಲವು ಭಾಗಗಳಲ್ಲಿನ ಅಡಕೆ ಬೆಳಿಗೆ ಎಲೆಚುಕ್ಕೆ ರೋಗ ಬಾಧಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ನೆರವಿಗೆ ಸರ್ಕಾರ ಧಾವಿಸಿರುವುದಾಗಿ ಸಚಿವರು ಹೇಳಿದರು. ಎಲೆ ಚುಕ್ಕೆ ರೋಗವನ್ನು ಹತೋಟಿಗೆ ತರುವ ಬಗ್ಗೆ, ರೈತರಿಗೆ ಉಚಿತವಾಗಿ ಔಷಧಿ ಹಾಗೂ ಸುಧಾರಿತ ಧೋಟಿಯನ್ನು ಒದಗಿಸುವ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ಮುನಿರತ್ನ ತಿಳಿಸಿದರು.

ಎಲೆಚುಕ್ಕೆ ರೋಗದಿಂದ ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬ ಬಗ್ಗೆ ಸಮೀಕ್ಷೆ ನಡೆಸುವ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು. ಈ ಕುರಿತು ಇದಾಗಲೇ ಸಭೆ ನಡೆಸಿ ಚರ್ಚಿಸಲಾಗಿದೆ. ಅಡಕೆ ಬೆಳೆಗಾರರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಅವರಿಗೆ ಸೂಕ್ತ ಔಷಧಗಳ ಪೂರೈಕೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.