ಜಿಲ್ಲೆ

ಮ್ಯಾಟ್ರಿಮೋನಿ ಸೈಟ್‌ನಿಂದ ಪರಿಚಯ, ಮದ್ವೆ ಬಳಿಕ ಚಿನ್ನಾಭರಣದೊಂದಿಗೆ ಎಸ್ಕೇಪ್‌- ಹಲವರ ‘ಪತಿ’ ಈತ!

ಬೆಂಗಳೂರು: ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಮಹಿಳೆಯೊಬ್ಬರ ಸ್ನೇಹ ಮಾಡಿಕೊಂಡು, ಆ ಮೂಲಕ ಮದುವೆಯನ್ನೂ ಮಾಡಿಕೊಂಡು ನಂತರ ಚಿನ್ನಾಭರಣಗಳ ಜತೆ ಪತಿ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಶಾದಿ ಡಾಟ್‌ ಕಾಮ್‌ ವೆಬ್‌ಸೈಟ್‌ ಮೂಲಕ ಪರಿಚಯ ಮಾಡಿಕೊಂಡು ಹೀಗೆ ಮೋಸ ಮಾಡಿದವನು ತಹ್ಸೀನ್ ಅಹ್ಮದ್. ಪತಿಯ ವಿರುದ್ಧ ಈಗ ನ್ಯಾಯ ದೊರಕಿಸಿಕೊಡುವಂತೆ ರಿಹಾನಾ ಬೇಗಂ ಬೆಂಗಳೂರು ನಗರ ಪೊಲೀಸ್​ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ರಿಹಾನಾ ಬೇಗಂ ಅವರನ್ನು ನಿಖಾ ಮಾಡಿಕೊಂಡ ಕೆಲವೇ ದಿನಗಳಲ್ಲಿ ತಹ್ಸೀನ್ ಅಹ್ಮದ್ ಪತ್ನಿಗೆ ಮನೆಗೂ ಕರೆದುಕೊಂಡು ಹೋಗಲಿಲ್ಲ. ಬದಲಿಗೆ ಮನೆ ನಿರ್ಮಾಣದ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಿನ್ನ ಮನೆಯಲ್ಲಿಯೇ ಉಳಿದುಕೊಳ್ಳುವೆ ಎಂದಿದ್ದಾನೆ. ಪತಿಯನ್ನು ನಂಬಿದ ರಿಹಾನಾ ಅವರ ತಮ್ಮ ತವರಿನಲ್ಲಿಯೇ ಪತಿಯನ್ನೂ ಉಳಿಸಿಕೊಂಡಿದ್ದಾರೆ.

ಮದುವೆಯಾದ ಒಂದು ತಿಂಗಳಿಗೆ ತನಗೆ ಬಿಜಿನೆಸ್‌ ಶುರು ಮಾಡಬೇಕಿರುವ ಹಿನ್ನೆಲೆಯಲ್ಲಿ ಹಣ ನೀಡುವಂತೆ ಪತ್ನಿಯನ್ನು ತಹ್ಸೀನ್ ಅಹ್ಮದ್ ಒತ್ತಾಯಿಸಿದ್ದಾನೆ. ನಿತ್ಯವೂ ಹಣಕ್ಕಾಗಿ ಪತಿ ಒತ್ತಾಯಿಸುತ್ತಿದ್ದಂತೆಯೇ ರಿಹಾನಾ ಎರಡು ಲಕ್ಷ ರೂಪಾಯಿ ನಗದು ಮತ್ತು 6 ಲಕ್ಷ ಮೌಲ್ಯದ ಚಿನ್ನಾಭರಣ ನೀಡಿದ್ದಾರೆ. ಆದರೆ ಇದನ್ನು ತೆಗೆದುಕೊಂಡು ಹೋಗಿರುವ ಪತಿಮಹಾಶಯ ವಾಪಸ್‌ ಮನೆಗೆ ಬರಲೇ ಇಲ್ಲ.

ಇದರಿಂದ ಗಾಬರಿಗೊಂಡ ರಿಹಾನಾ ಪತಿಗಾಗಿ ಎಲ್ಲೆಡೆ ಹುಡುಕಾಡಿದ್ದಾರೆ. ತಾವು ಮೋಸ ಹೋಗಿರುವುದು ತಿಳಿಯುತ್ತಲೇ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ದೂರನ್ನು ಪಡೆದ ಪೊಲೀಸರು ತಹ್ಸೀನ್ ಅಹ್ಮದ್ ಹಿನ್ನೆಲೆ ಕೆದಕಿದಾಗ ಇದೇ ರೀತಿ ಈತ ಕೆಲವು ಮಹಿಳೆಯರನ್ನು ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಹೀಗೆ ಮದುವೆ ಹೆಸರಿನಲ್ಲಿ ಏನಿಲ್ಲವೆಂದರೂ ಐದಾರು ಮಹಿಳೆಯರಿಗೆ ಈತ ಮೋಸ ಮಾಡಿರುವುದು ತಿಳಿದಿದೆ. ದೂರು ದಾಖಲಾಗಿ ಎರಡು ವರ್ಷಗಳಾದರೂ ಇದುವರೆಗೆ ಆತನನ್ನು ಹುಡುಕುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿರುವ ರಿಹಾನಾ ಇದೀಗ ಈ ಬಗ್ಗೆ ಬೆಂಗಳೂರು ಪೊಲೀಸ್​ ಆಯುಕ್ತರಿಗೆ ದೂರು ನೀಡಿದ್ದಾರೆ.