ಹಾಸನ: ಕಬ್ಬಿಣದ ವಿಗ್ರಹಕ್ಕೆ ಚಿನ್ನದ ಲೇಪನ ಹಾಕಿ ಒಂದೂವರೆ ಲಕ್ಷ ಹಣ ಪೀಕಿ ಎಸ್ಕೇಪ್ ಆಗಿದ್ದಾನೆ ಕಳ್ಳ ಸ್ವಾಮೀಜಿ! ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮನೆಯ ತೋಟದಲ್ಲಿ ನಿಧಿ ಇದೆ ಎಂದು ಆಸೆ ತೋರಿಸಿ ಹಣ ಪೀಕಿ ಸ್ವಾಮೀಜಿ ಎಸ್ಕೇಪ್ ಆಗಿದ್ದು, ಪೊಲೀಸರು ಈತನಿಗಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಈ ಕಳ್ಳನನ್ನು ಮಂಜುನಾಥ್ ಎಂದು ಗುರುತಿಸಲಾಗಿದೆ. ಮಂಜೇಗೌಡ ಹಾಗೂ ಪುತ್ರ ಪುನೀತ್ ಎಂಬುವರಿಗೆ ಪಂಗನಾಮ ಹಾಕಿದ್ದಾನೆ ಈತ.
ರಾತ್ರೋ ರಾತ್ರಿ ನಿಧಿ ಹುಡುಕಾಟ ನಡೆದಿದೆ. ಈ ಹುಡುಕಾಟದಲ್ಲಿ ಕಬ್ಬಿಣದ ವಿಗ್ರಹಕ್ಕೆ ಚಿನ್ನದ ಲೇಪನ ಹಾಕಿ ವಿಗ್ರಹ ಸಿಕ್ಕಿರುವುದಾಗಿ ಹೇಳಿ ನಂಬಿಸಿದ್ದಾನೆ. ಕಬ್ಬಿಣದ ವಿಗ್ರಹಕ್ಕೆ ಚಿನ್ನದ ಲೇಪನ ಹಾಕಿ ಭೂಮಿಯೊಳಗೆ ಹೂತಿಟ್ಟು ಮತ್ತೆ ಅದನ್ನೇ ತೆಗೆದು ಕೊಡುವ ವಿಡಿಯೋ ದಿಗ್ವಿಜಯ ನ್ಯೂಸ್ಗೆ ಲಭ್ಯವಾಗಿದೆ. ವಿಗ್ರಹ ತೆಗೆಯುವ ವೇಳೆ ಮಹಿಳೆ ಕೈ ಕೊಯ್ದು ರಕ್ತ ಸೋರಿಸಿದ್ದಾನೆ ಈತ.
ಅರಕಲಗೂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ ಎಂದು ಮಂಜೇಗೌಡನ ಮಗ ಪುನೀತ್ ಮಾಹಿತಿ ನೀಡಿದ್ದಾರೆ.
ಕಳ್ಳ ಸ್ವಾಮೀಜಿ ಮಂಜುನಾಥ್ ಮೂಲತಃ ದೊಡ್ಡಹಳ್ಳಿ ಗ್ರಾಮದವನಾಗಿದ್ದು, ಈತನ ಅಸಲಿ ವಿಷಯ ಬಹಿರಂಗ ಆಗುತ್ತಿದ್ದಂತೆಯೇ ಓಡಿಹೋಗಿದ್ದಾನೆ. ಇದೇ ರೀತಿ ವಿವಿಧ ಮಂದಿಗೆ ಒಟ್ಟು ಐದು ಲಕ್ಷ ಮೋಸ ಮಾಡಿರುವುದು ತನಿಖೆ ವೇಳೆ ತಿಳಿದು ಬಂದಿದೆ. (ದಿಗ್ವಿಜಯ ನ್ಯೂಸ್) ವಿಡಿಯೋ ಇಲ್ಲಿದೆ ನೋಡಿ: