ಬೆಂಗಳೂರು: ಅನ್ಲಾಕ್ 4.0 ನಿನ್ನೆಯಷ್ಟೇ ಘೋಷಣೆಯಾಗಿದ್ದು, ಇವತ್ತಿನಿಂದ (ಜುಲೈ 19) ಜಾರಿಗೆ ಬರುವಂತೆ ಚಿತ್ರಮಂದಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಕೆಲವೊಂದು ಷರತ್ತು ವಿಧಿಸಿ ಅನುಮತಿ ನೀಡಲಾಗಿದ್ದು, ಚಿತ್ರರಂಗದವರ ಬಹುದೊಡ್ಡ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ.
ಚಿತ್ರಮಂದಿರ ಓಪನ್ ಆಗಿರುವ ಖುಷಿಯಲ್ಲಿ ನಲಿದಾಡುತ್ತಿದ್ದ ಚಿತ್ರಪ್ರೇಮಿಗಳಿಗೆ ಈಗ ಒಂದು ಕಹಿ ಸುದ್ದಿ ಸಿಕ್ಕಿದೆ. ಅದೇನೆಂದರೆ ಸರ್ಕಾರ ಅನುಮತಿ ನೀಡಿದರೂ ಇವತ್ತಿನಿಂದ (ಜುಲೈ 19) ಚಿತ್ರ ಪ್ರದರ್ಶನ ಶುರುವಾಗುವುದಿಲ್ಲ ಎಂದು ತಿಳಿದುಬಂದಿದೆ. ಚಿತ್ರಪ್ರದರ್ಶನಕ್ಕಾಗಿ ಇನ್ನೂ ಸ್ವಲ್ಪ ದಿನ ಜನರು ಕಾಯಲೇಬೇಕಾದ ಅನಿವಾರ್ಯತೆ ಉಂಟಾಗಿದೆ.
ಶೇ. 50ರಷ್ಟು ಸೀಟಿಂಗ್ ಅವಕಾಶವನ್ನು ರಾಜ್ಯ ಸರ್ಕಾರವೇನೋ ನೀಡಿದೆ. ಆದರೆ ಹೊಸ ಸಿನಿಮಾ ರಿಲೀಸ್ ಆಗೋವರೆಗೂ ಓಪನ್ ಮಾಡಲ್ಲ ಎಂದು ಚಿತ್ರಮಂದಿರದ ಮಾಲೀಕರು ಹೇಳುತ್ತಿದ್ದಾರೆ. ಕಳೆದ ಬಾರಿ ರಿಲೀಸ್ ಆದ ಸಿನಿಮಾಗಳನ್ನೇ ಪ್ರದರ್ಶನ ಮಾಡಲಾಗಿತ್ತು. ಆ ತಂತ್ರ ವರ್ಕೌಟ್ ಆಗಿರಲಿಲ್ಲ, ಹಾಗಾಗಿ ಹೊಸ ಸಿನಿಮಾಗಾಗಿ ಮಾಲೀಕರು ಕಾಯುತ್ತಿದ್ದು, ಅಲ್ಲಿಯವರೆಗೂ ಚಿತ್ರಮಂದಿರ ತೆರೆಯದಿರಲು ನಿರ್ಧರಿಸಿದ್ದಾರೆ.
ಮುಂದಿನ ವಾರ ಹೊಸ ಸಿನಿಮಾ ರಿಲೀಸ್ ಆದರೆ ಮಾತ್ರ ಚಿತ್ರಮಂದಿರಗಳು ತೆರೆಯಲಿವೆ.