ಜಿಲ್ಲೆ

ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಜ್ವರ: ಸೋನಿಯಾ ಪರ ನಾಳಿನ ಭಾರಿ ಹೋರಾಟಕ್ಕೆ ಗೈರು?

ಬೆಂಗಳೂರು: ನ್ಯಾಷನಲ್​ ಹೆರಾಲ್ಡ್​ ಪತ್ರಿಕೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಸ್ರಾರು ಕೋಟಿ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್​ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಕರೆಯುತ್ತಿರುವುದರ ವಿರುದ್ಧ ಕಾಂಗ್ರೆಸ್​ನಿಂದ ನಡೆಯುತ್ತಿರುವ ದೇಶದ ಮಟ್ಟದ ಪ್ರತಿಭಟನೆ ನಾಳೆಯೂ ಮುಂದುವರೆಯಲಿದೆ.

ಇದಾಗಲೇ ರಾಹುಲ್​ ಗಾಂಧಿ ಅನೇಕ ದಿನಗಳವರೆಗೆ ವಿಚಾರಣೆ ಎದುರಿಸಿದ್ದರೆ, ಸೋನಿಯಾ ಗಾಂಧಿಯವರಿಗೆ ನಾಳೆ (ಜುಲೈ 26) ಎರಡನೆಯ ದಿನದ ವಿಚಾರಣೆ ನಡೆಯಲಿದೆ. ಇದನ್ನು ವಿರೋಧಿಸಿ ಮೌನ ಪ್ರತಿಭಟನೆ ನಡೆಸಲು ಕಾಂಗ್ರೆಸ್​ ನಿರ್ಧರಿಸಿದೆ. ಈ ಸಂಬಂಧದ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಲು ಪಕ್ಷ ಸಂಸದರು, ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಉಸ್ತುವಾರಿಗಳ ಸಭೆಯನ್ನು ಇಂದು ರಾತ್ರಿಗೆ ಕರೆದಿದೆ.

ಆದರೆ ಈ ನಡುವೆಯೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಜ್ವರ ಕಾಣಿಸಿಕೊಂಡಿರುವುದಾಗಿ ತಿಳಿದುಬಂದಿದೆ. ವೈದ್ಯರು ಬಂದು ಇಂಜೆಕ್ಷನ್ ಕೊಟ್ಟು ಪರೀಕ್ಷೆ ಮಾಡಿ ತೆರಳಿದ್ದಾರೆ. ಸಿದ್ದರಾಮಯ್ಯ ಅವರಿಗೆ ರೆಸ್ಟ್ ಮಾಡಲು ಹೇಳಿರುವ ಕಾರಣ, ಇಂದು ಯಾವುದೇ ಸಾರ್ವಜನಿಕರ ಭೇಟಿಯಾಗುತ್ತಿಲ್ಲ ಮಾಜಿ ಸಿಎಂ.

ಜ್ವರ ಸ್ವಲ್ಪ ಹೆಚ್ಚಿಗೆ ಇರುವ ಹಿನ್ನೆಲೆಯಲ್ಲಿ ನಾಳೆ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಭಾಗಿಯಾಗುವುದು ಅನುಮಾನ ಎಂದು ಹೇಳಲಾಗುತ್ತಿದೆ.