ಜಿಲ್ಲೆ

ಹಲೋ... ನಾನು ಮೋದಿ ಕಚೇರಿಯಿಂದ ಮಾತಾಡ್ತಿರೋದು, ಇವೆಲ್ಲಾ ವ್ಯವಸ್ಥೆ ಆಗ್ಬೇಕ್​ ನೋಡಿ ಎಂದು ಚಾಮರಾಜನಗರದ ಡಿಸಿಗೆ ಕರೆ!

ಚಾಮರಾಜನಗರ: ಪ್ರಧಾನಿ ಕಚೇರಿಯ ಅಧಿಕಾರಿ ಸೋಗಿನಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿಗೆ ಕರೆ ಮಾಡಿದ್ದ ನಕಲಿ ಅಧಿಕಾರಿ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.

ಬಿಳಿಗಿರಿರಂಗನ ಬೆಟ್ಟದ ಕೆ.ಗುಡಿಯಲ್ಲಿ ವಾಸ್ತವ್ಯ, ಜಂಗಲ್ ಸಫಾರಿ, ದೇವರ ದರ್ಶನ ದೊಡ್ಡಸಂಪಿಗೆ ಮರದ ವೀಕ್ಷಣೆಗೆ ವ್ಯವಸ್ಥೆ ಮಾಡುವಂತೆ ರಾವ್ ಹೆಸರಿನ ವ್ಯಕ್ತಿಯೊಬ್ಬ ಚಾಮರಾಜನಗರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಕರೆ ಮಾಡಿದ್ದಾನೆ. `ನಾನು ಪ್ರಧಾನ ಮಂತ್ರಿ ಕಚೇರಿಯಲ್ಲಿ ಕೆಲಸ ನಿರ್ವಹಿಸ್ತಾ ಇದ್ದೀನಿ’ ಎಂದು ಈ ಸಂದರ್ಭದಲ್ಲಿ ಪರಿಚಯಿಸಿಕೊಂಡಿದ್ದಾನೆ.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಯವರಿಗೆ ಸಂದೇಹ ಬಂದು ನಿಖರ ಹುದ್ದೆ ಕೇಳಿದ್ದಾರೆ. ಹೆಸರು ಹಾಗೂ ಹುದ್ದೆ ಬಹಿರಂಗಪಡಿಸಬಾರದೆಂದು ವ್ಯಕ್ತಿ ತಿಳಿಸಿದ್ದಾನೆ. ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ ಚಾರುಲತಾ.

ಪ್ರಧಾನಮಂತ್ರಿ ಕಚೇರಿ ಹೆಸರು ದುರುಪಯೋಗ ಆರೋಪದ ಮೇಲೆ ಅಪರಿಚಿತ ವ್ಯಕ್ತಿ ವಿರುದ್ದ ಎಫ್.ಐ.ಆರ್ ದಾಖಲಾಗಿದೆ. ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆರಂಭಿಕ ತನಿಖೆಯಿಂದ ಈತ ಮೈಸೂರು ಮೂಲದ ವ್ಯಕ್ತಿ ಎಂಬ ಬಗ್ಗೆ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ಅಪರಿಚಿತ ವ್ಯಕ್ತಿಯ ಪತ್ತೆಗೆ ಬಲೆ ಬೀಸಲಾಗಿದೆ.