ಬೆಂಗಳೂರು: ಮಕ್ಕಳ ಕಷ್ಟವನ್ನು ಪಾಲಕರಿಗೆ ಅದರಲ್ಲಿಯೂ ಅಮ್ಮಂದಿರಿಗೆ ನೋಡಲು ಆಗುವುದಿಲ್ಲ ಎನ್ನುವುದು ನಿಜವೇ. ಅದಕ್ಕೇ ಹೆತ್ತ ಕರುಳು ಎನ್ನುವುದು. ಆದರೆ ಇಲ್ಲೊಬ್ಬ ತಾಯಿ ಮಗನಿಗೆ ಜೈಲಿನಲ್ಲಿ ಡ್ರಗ್ಸ್ ಪೂರೈಕೆ ಮಾಡಿ ಈಗ ತಾನೂ ಜೈಲು ಪಾಲಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಶಿಕಾರಿ ಪಾಳ್ಯದ ನಿವಾಸಿ ಪರ್ವೀನ್ ತಾಜ್ ಈಗ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಮಗನ ಜತೆ ಇರಬೇಕಾದ ಅನಿವಾರ್ಯತೆ ಉಂಟಾಗಿದೆ. ಈಕೆಯ ಮಗ ಮೊಹಮ್ಮದ್ ಬಿಲಾಲ್ ಸುಲಿಗೆ, ದರೋಡೆ ಪ್ರಕರಣದಲ್ಲಿ ಜೈಲು ಸೇರಿದ್ದಾನೆ. ಇದಾಗಲೇ 11 ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿರುವ ಈತನನ್ನು 2020ರಲ್ಲಿ ದರೋಡೆ, ಸುಲಿಗೆ ಪ್ರಕರಣದಲ್ಲಿ ಕೋಣನಕುಂಟೆ ಪೊಲೀಸರು ಬಂಧಿಸಿದ್ದರು. ಡ್ರಗ್ಸ್ ದಾಸನಾಗಿರುವ ಆತನಿಗೆ ಅದನ್ನು ಬಿಟ್ಟು ಇರುವುದು ಅಸಾಧ್ಯವಾಗಿದೆ. ಇದೇ ಕಾರಣಕ್ಕೆ ತಾಯಿ ಪರ್ವೀನ್, ಬಟ್ಟೆಯ ಬ್ಯಾಗ್ನಲ್ಲಿ ಡ್ರಗ್ಸ್ ತೆಗೆದುಕೊಂಡು ಬಂದಿದ್ದಾಳೆ!
ಬಟ್ಟೆ ಕೊಡುವ ಬಂದಿದ್ದೇನೆ ಎಂದು ಜೈಲಿನಲ್ಲಿದ್ದ ಪೊಲೀಸರಿಗೆ ಬ್ಯಾಗ್ ತೋರಿಸಿ ಒಳಗೆ ಹೋಗಿದ್ದಾಳೆ. ಪೊಲೀಸರು ಆಕೆಯನ್ನು ವಿಸಿಟಿಂಗ್ ರೂಮ್ಗೆ ಬಿಟ್ಟಿದ್ದಾರೆ. ವಿಸಿಟಿಂಗ್ ರೂಮ್ನಲ್ಲಿ ಕುಳಿತಿದ್ದ ಮಹಿಳೆ ಬ್ಯಾಗ್ನನ್ನು ಪೊಲೀಸರು ತಪಾಸಣೆ ಮಾಡಿದಾಗ ಅದರಲ್ಲಿ ಡ್ರಗ್ಸ್ ಪತ್ತೆಯಾಗಿದೆ.
ತಕ್ಷಣ ಜೈಲು ಸಿಬ್ಬಂದಿ ಪರಪ್ಪನ ಅಗ್ರಹಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿ ತಾಯಿ ಪರ್ವೀನ್ ತಾಜ್ ಹಾಗೂ ಮಗ ಬಿಲಾಲ್ ಮೇಲೆ ಕೇಸ್ ದಾಖಲಿಸಿರುವ ಪರಪ್ಪನ ಅಗ್ರಹಾರ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಜೈಲಿನಲ್ಲಿ ಇರುವ ಯಾರಿಗೋ ಕೊಡುವ ಸಲುವಾಗಿ ಪರಿಚಯದವರೊಬ್ಬರು ನನಗೆ ಈ ಬ್ಯಾಗ್ ಕೊಟ್ಟಿದ್ದರು. ಈ ಬ್ಯಾಗ್ ಅನ್ನು ನಿನ್ನ ಮಗನ ಕೈಯಲ್ಲಿ ಕೊಟ್ಟು ಆತನಿಗೆ ಕೊಡಲು ಹೇಳಿದ್ದರು. ನನಗೆ ಇದರ ಅರಿವೇ ಇಲ್ಲ ಎಂದು ಮಹಿಳೆ ಹೇಳಿದ್ದಾಳೆ. ಸದ್ಯ ಆಕೆಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಪೊಲೀಸರು.