ಜಿಲ್ಲೆ

ಕರೊನಾಕ್ಕೆ ಕಾರಣವಾದದ್ದು ಕಾಂಗ್ರೆಸ್‌ ಅವೈಜ್ಞಾನಿಕ ನಡೆ: ಸಚಿವ ಡಾ.ಕೆ.ಸುಧಾಕರ್ ತಿರುಗೇಟು

ಬೆಂಗಳೂರು: ಕರೊನಾ ಸೋಂಕು ಕಾಲಿಟ್ಟ ಬಳಿಕ ಈ ರಾಜ್ಯದಲ್ಲಿ ಅವೈಜ್ಞಾನಿಕವಾಗಿ ನಡೆದುಕೊಂಡಿದ್ದಾರೆ ಎಂದು ಹೇಳುವುದಾದರೆ ಅದು ಕಾಂಗ್ರೆಸ್ ಗೆ ಅನ್ವಯಿಸುತ್ತದೆ. ಸರ್ಕಾರದ ನಡೆ ಅವೈಜ್ಞಾನಿಕವಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿರುಗೇಟು ನೀಡಿದರು.

ಸದಾಶಿವ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಭಾನುವಾರ ಪ್ರತಿಕ್ರಿಯಿಸಿದ ಅವರು, ಕರೊನಾ ನಿಯಂತ್ರಣ ಹಾಗೂ ನಿರ್ಬಂಧಗಳ ಜಾರಿ ಸೇರಿದಂತೆ ಪ್ರತಿಯೊಂದು ಹಂತದಲ್ಲಿ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ ಎಂದು ಹೇಳುವ ಮೂಲಕ ಸರ್ಕಾರದ ನಡೆ ಅವೈಜ್ಞಾನಿಕವೆಂಬ ಕಾಂಗ್ರೆಸ್ ನಾಯಕರ ಟೀಕೆಗೆ ಪ್ರತ್ಯುತ್ತರಿಸಿದರು.

ಮೊದಲ ಅಲೆ ಪ್ರವೇಶಿಸಿದಾಗ ಕೇವಲ 100 ಸೋಂಕು ಪ್ರಕರಣಗಳು ವರದಿಯಾದ ತಕ್ಷಣ ಇಡೀ ದೇಶದಲ್ಲಿ ಲಾಕ್ ಡೌನ್ ಜಾರಿ, ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ನಿಷೇಧ ಮಾಡಲಾಯಿತು. ವೈರಾಣು ಹೇಗೆ ವರ್ತಿಸುತ್ತದೆ ಎನ್ನುವುದು ತಿಳಿದಿಲ್ಲವಾದ್ದರಿಂದ ಈ ಕ್ರಮ ಕೈಗೊಳ್ಳುವುದು ಅನಿವಾರ್ಯವಾಯಿತು.

ಎರಡನೇ ಅಲೆಯಲ್ಲಿ ರಾಜ್ಯದ ಪ್ರಕರಣಗಳ 5,000 ದಾಟುವ ಜತೆಗೆ ಗಂಭೀರ ಸ್ವರೂಪ ಪಡೆದ ಕಾರಣ ಜನರ ಜೀವ ಉಳಿಸಲು ಕಠಿಣ ಕ್ರಮ ವಿಧಿಸಲಾಯಿತು. ಆರೋಗ್ಯ ಮೂಲ ಸವಲತ್ತುಗಳ ಸುಧಾರಣೆ, ತಪಾಸಣೆ, ಚಿಕಿತ್ಸೆ, ವ್ಯವಸ್ಥೆ ಬಲವರ್ಧನೆಗೆ ಈ ಉಪಕ್ರಮ ಅನುಸರಿಸಲಾಯಿತು.

ಮೂರನೇ ಅಲೆಯಲ್ಲಿ ಸೋಂಕು ಉಲ್ಬಣಿಸಿದ ಕೂಡಲೇ ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲಾಗಿದೆ. ಐದು ಟಿ ಸೂತ್ರಗಳ ಪಾಲನೆ, ತಜ್ಞರ ಸಲಹೆಯ ಪ್ರಕಾರ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು, ಎರಡು ವಾರಗಳ ಅವಧಿಯಲ್ಲಿ ಸೋಂಕು ಪ್ರಕರಣಗಳು ಹೆಚ್ಚಿದರೂ ತೀವ್ರತೆಯಿಲ್ಲ. ಬೇಗನೆ ಚೇತರಿಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆಗಳ ಮೇಲೆ ಒತ್ತಡವಿಲ್ಲ, ಮನೆಯಲ್ಲೇ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಿದೆ ಎಂಬ ವಾಸ್ತವಿಕ ಮಾಹಿತಿ, ವೈಜ್ಞಾನಿಕ ವಿಶ್ಲೇಷಣೆಯಂತೆ ಷರತ್ತುಬದ್ಧವಾಗಿ ವಾರಾಂತ್ಯದ ಕರ್ಫ್ಯೂ ವಾಪಸ್ ಪಡೆಯಲಾಗಿದೆ ಎಂದು ವಿವರಿಸಿದರು.

ಶತಕದ ಸಾಧನೆ

ಅರ್ಹ ಫಲಾನುಭವಿಗಳಿಗೆ ಕರೊನಾ ನಿರೋಧಕ ಲಸಿಕೆ ಮೊದಲ ಡೋಸ್ ವಿತರಣೆಯಲ್ಲಿ ರಾಜ್ಯ ಶತಕದ ಸಾಧನೆ ಮಾಡಿದೆ. ಎರಡನೇ ಶೇಕಡ 85ರಷ್ಟು ಹಾಗೂ 15 ರಿಂದ 17ರ ವಯೋಮಿತಿ ಮಕ್ಕಳಿಗೆ ಶೇ.65ರಷ್ಟು ಲಸಿಕೆ ವಿತರಣೆಯಾಗಿದೆ ಎಂದು ಡಾ.ಕೆ.ಸುಧಾಕರ್ ತಿಳಿಸಿದರು.