ಜಿಲ್ಲೆ

ಕಾಂಗ್ರೆಸ್‌ಗೆ ಸೇರಪ್ಪಾ ಎಂದು ಪುನೀತ್‌ಗೆ ನಾನು ಬೇಕಾದಷ್ಟು ಗಾಳ ಹಾಕಿದ್ದೆ, ಪ್ರಯೋಜನ ಆಗಲಿಲ್ಲ ಎಂದ ಡಿಕೆಶಿ

suchetana

ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ಅಗಲಿ ಒಂದು ತಿಂಗಳು ಕಳೆಯುತ್ತಾ ಬಂದರೂ, ಅವರ ಜತೆಗಿನ ಒಡನಾಟವನ್ನು ಇಂದಿಗೂ ಹಲವಾರು ಸ್ಮರಿಸಿಕೊಳ್ಳುತ್ತಲೇ ಇದ್ದಾರೆ. ರಾಜಕೀಯ ಪ್ರವೇಶ ಮಾಡದೇ ತಂದೆ ಡಾ.ರಾಜ್‌ಕುಮಾರ್‌ ಅವರ ಆದರ್ಶವನ್ನು ಕಾಪಾಡಿಕೊಂಡು ಬಂದಿರುವ ಪುನೀತ್‌ ಅವರ ಬಗ್ಗೆ ಈಗ ಒಂದೊಂದಾಗೇ ವಿಷಯಗಳು ಹೊರಬರುತ್ತಿವೆ.

ಪ್ರಧಾನಿ ನರೇಂದ್ರ ಮೋದಿಯವರು ಕೂಡ ಪುನೀತ್‌ ಅವರನ್ನು ರಾಜಕೀಯಕ್ಕೆ ಆಹ್ವಾನಿಸಿದ್ದರು, ಆದರೆ ಪುನೀತ್‌ ಇದನ್ನು ನಯವಾಗಿ ತಿರಸ್ಕರಿಸಿರುವ ಸುದ್ದಿಯ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕೂಡ ಮಾತನಾಡಿ, ಕಾಂಗ್ರೆಸ್‌ಗೆ ಬರುವಂತೆ ಪುನೀತ್‌ಗೆ ನಾನು ಗಾಳ ಹಾಕಿದ್ದೆ ಎಂದಿದ್ದಾರೆ.

‘ನಾನು ಮತ್ತು ಸಿದ್ದರಾಮಯ್ಯ ಒಂದು ದಿನ ಪುನೀತ್‌ ಅವರನ್ನು ಕರೆದು ನಮ್ಮ ಪಕ್ಷಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದೆವು. ನಾನಂತು ಬಿಡಿ, ಎಷ್ಟೋ ಬಾರಿ ಗಾಳ ಹಾಕಿದ್ದೆ. ಆದರೆ ಪುನೀತ್‌ ಅದನ್ನು ತಿರಸ್ಕರಿಸಿದ್ದರು. ಸಾರ್ ನಮ್ಮ ತಂದೆ ನಡೆದಿರುವ ಹಾದಿಯನ್ನು ನಾನು ಬಿಡಲ್ಲ. ತಂದೆ ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತೇನೆ ನನಗೆ ಯಾವ ರಾಜಕಾರಣವು ಬೇಡ. ನಾನು ಒಂದು ರಾಜಕೀಯ ಪಕ್ಷದ ಜತೆ ಗುರುತಿಸಿಕೊಂಡರೆ ಉಳಿದವರಿಗೆ ಬೇಸರವಾಗುತ್ತದೆ. ನಾನು ನಟನಾಗಿಯೇ ಉಳಿದುಬಿಡುತ್ತೇನೆ, ಆದ್ದರಿಂದ ನನ್ನನ್ನು ಬಿಟ್ಟುಬಿಡಿ ಎಂದು ಹೇಳಿದ್ದರು ಎಂಬುದಾಗಿ ಶಿವಕುಮಾರ್‌ ನೆನಪಿಸಿಕೊಂಡರು.

ಅವರ ಅತ್ತಿಗೆ ಚುನಾವಣೆಯಲ್ಲಿ ನಿಂತಾಗಲೂ ಪುನೀತ್‌ ಪ್ರಚಾರಕ್ಕೆ ಬರಲಿಲ್ಲ. ತಮ್ಮ ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಕೆಲಸ ಮಾಡಿದ್ದ ವ್ಯಕ್ತಿ ಪುನೀತ್. ಅವರು ಇಂದು ಇಲ್ಲ ಎಂದು ನೆನಪಿಸಿಕೊಳ್ಳಲು ತುಂಬಾ ದುಃಖವಾಗುತ್ತದೆ ಎಂದರು.