ಎಸ್.ದೇವಗಾನಹಳ್ಳಿಯಲ್ಲಿ ಅಂಗಡಿ ಬಳಿ ಬಸ್‌ಗಾಗಿ ಕಾಯುತ್ತಿರುವ ಪ್ರಯಾಣಿಕರು. 
ಜಿಲ್ಲೆ

ಎಸ್.ದೇವಗಾನಹಳ್ಳಿಗೆ ಬೇಕು ಬಸ್‌ನಿಲ್ದಾಣ

ಎನ್.ವೆಂಕಟೇಶ್

ಸೌಲಭ್ಯವಿಲ್ಲದೆ ಪ್ರಯಾಣಿಕರು, ವಿದ್ಯಾರ್ಥಿಗಳಿಗೆ ತೊಂದರೆ ಹದಗೆಟ್ಟ ರಸ್ತೆ

ಸಾದಲಿ: ಎಸ್.ದೇವಗಾನಹಳ್ಳಿಯಲ್ಲಿ ಸೂಕ್ತ ಬಸ್ ನಿಲ್ದಾಣವಿಲ್ಲದೇ ಪ್ರಯಾಣಿಕರು ಅಕ್ಕಪಕ್ಕದ ಚಿಲ್ಲರೆ ಅಂಗಡಿಯ ಆವರಣದಲ್ಲಿ ಗಂಟೆಗಟ್ಟಲೇ ಬಸ್‌ಗಾಗಿ ಕಾಯುವ, ರಸ್ತೆಯಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ.

ಎಸ್.ದೇವಗಾನಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದು, ತಾಲೂಕು ಕೇಂದ್ರದಿಂದ 40 ಕಿ.ಮೀ. ದೂರದಲ್ಲಿದೆ.

ಚೆನ್ನಕೇಶವ ಬೆಟ್ಟ, ರಾಮಸಮುದ್ರ ಕೆರೆ, ಶ್ರೀ ಸಾದಲಮ್ಮ ದೇವಾಲಯ ಸೇರಿ ಪುರಾಣ ಪ್ರಸಿದ್ಧ ಹಾಗೂ ಪ್ರವಾಸಿ ತಾಣಗಳಿವೆ. ಯರ‌್ರನಾಗೇನಹಳ್ಳಿ, ಸತ್ಯಸಾಯಿನಗರ, ಎಸ್. ದೇವಗಾನಹಳ್ಳಿ, ಸೋಮೇಶ್ವರ, ಬೋಯಿನಹಳ್ಳಿ, ತಿಮ್ಮಗಾರಹಳ್ಳಿ, ಎಸ್.ಕುರುಬರಹಳ್ಳಿ, ವರ್ದಗಾನಹಳ್ಳಿ, ಎಸ್.ಗುಂಡ್ಲಹಳ್ಳಿ, ಲಕ್ಷ್ಮೀಪಲ್ಲಿ, ಬೊಮ್ಮನಹಳ್ಳಿ ಸೇರಿ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಗ್ರಾಮದ ಪ್ರಮುಖ ರಸ್ತೆಯಲ್ಲಿರುವ ಹಳೇ ಬಸ್ ತಂಗುದಾಣದಲ್ಲಿ ಅನೈರ್ಮಲ್ಯ ಸಮಸ್ಯೆ ಹಾಗೂ ಮೂಲಸೌಕರ್ಯ ಕೊರತೆ ಇದೆ.

ಈ ಮಾರ್ಗದಲ್ಲಿ ವಿವಿಧ ಭಾಗಗಳಿಗೆ ಪ್ರತಿನಿತ್ಯ ತೆರಳುವ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಹೂವು, ಹಣ್ಣು, ತರಕಾರಿ ಮತ್ತಿತರ ಉತ್ಪನ್ನಗಳನ್ನು ಸಾಗಿಸಲು ಇದೇ ಮಾರ್ಗವನ್ನು ಬಳಸುತ್ತಾರೆ. ಪ್ರಯಾಣಿಕರ ದಟ್ಟಣೆ ಇರುವ ಇಲ್ಲಿ ಬಸ್‌ಗಾಗಿ ಕಾಯಲು ಸೂಕ್ತ ಸ್ಥಳವಿಲ್ಲ. ಅಕ್ಕಪಕ್ಕದ ಚಿಲ್ಲರೆ ಅಂಗಡಿ, ರಸ್ತೆಬದಿಯಲ್ಲೇ ನಿಂತುಕೊಳ್ಳಬೇಕು. ಇಲ್ಲಿ 3 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಶೌಚಗೃಹ ಬಳಕೆಯಾಗುತ್ತಿಲ್ಲ. ಇದು ಹೆಸರಿಗೆ ಎನ್ನುವಂತೆ ಇದೆಯಷ್ಟೇ. ಇದರಿಂದ ಜನರಲ್ಲಿ ಬಯಲು ಬಹಿರ್ದೆಸೆ ಚಾಳಿ ಹೆಚ್ಚಾಗುತ್ತಿದೆ. ಇನ್ನು ರಸ್ತೆಯಂತೂ ಗುಂಡಿಗಳಿಂದ ತುಂಬಿದ್ದು, ಪ್ರಯಾಣ ಅಸಹನೀಯವಾಗಿದೆ. ಇನ್ನು ರಾತ್ರಿ ಹೊತ್ತಿನಲ್ಲಿ ಬೀದಿ ದೀಪವಿಲ್ಲದೇ ಕತ್ತಲು ಆವರಿಸುತ್ತಿರುತ್ತದೆ. ಇದೇ ಮಾರ್ಗದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರತಿನಿತ್ಯ ಓಡಾಡುತ್ತಿದ್ದರೂ ಸಮಸ್ಯೆಯ ಕಡೆಗೆ ಗಮನಹರಿಸಿಲ್ಲ. ಅಹವಾಲು ಸಲ್ಲಿಸಿದರೂ ಕಿವಿಗೊಡುತ್ತಿಲ್ಲ ಎನ್ನುವುದು ಜನರ ದೂರು.

ಬಸ್ ನಿಲ್ದಾಣವಿಲ್ಲದೇ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಹದಗೆಟ್ಟಿದೆ. ಮಳೆಗಾಲದಲ್ಲಿ ಓಡಾಡಲು ಸಾಧ್ಯವಾಗುವುದಿಲ್ಲ. ಸಂಬಂಧಪಟ್ಟವರು ಎಸ್.ದೇವಗಾನಹಳ್ಳಿ ಗ್ರಾಪಂ ಕೇಂದ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಅದರಲ್ಲೂ ಸಾರಿಗೆ ಹಾಗೂ ರಸ್ತೆ ಸೌಲಭ್ಯಕ್ಕೆ ಆದ್ಯತೆ ನೀಡಬೆಕು. -ಬಿ.ಬಾಲಸುಬ್ರಮಣ್ಯಮ್ ಶರ್ವಾ, ಎಸ್.ದೇವಗಾನಹಳ್ಳಿ ನ್ಯಾಯಬೆಲೆ ಅಂಗಡಿ, ಅಂಚೆ ಕಚೇರಿ, ಹಾಲಿನ ಡೇರಿ, ಬ್ಯಾಂಕ್ ಸೇರಿ ಇತರ ಕೆಲಸ ಕಾರ್ಯಗಳಿಗೆ ದೂರದ ಊರುಗಳಿಗೆ ಹೋಗಬೇಕು. ಈ ಸಂದರ್ಭದಲ್ಲಿ ಬಸ್‌ಗಾಗಿ ಬಿಸಿಲು ಮಳೆ ಎನ್ನದೆ ಗಂಟೆಗಟ್ಟಲೇ ಕಾಯಬೇಕಿದೆ. ಹಿರಿಯರು, ಅಂಗವಿಕಲರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಇದನ್ನು ಬಗೆಹರಿಸಬೇಕು. -ಕದಿರಪ್ಪ, ಎಸ್.ದೇವಗಾನಹಳ್ಳಿ