ಜಿಲ್ಲೆ

ರಾಜ್ಯದಲ್ಲಿ ಆತಂಕ ಸೃಷ್ಟಿಸಿದ ಡೆಂಘಿ: 18 ದಿನಗಳಲ್ಲಿ 910 ಮಂದಿಗೆ ಜ್ವರ- ಒಟ್ಟೂ 3,384 ಪ್ರಕರಣ!

suchetana

ಬೆಂಗಳೂರು: ರಾಜ್ಯದಲ್ಲಿ ಡೆಂಘಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, 18 ದಿನಗಳಲ್ಲಿ 910 ಮಂದಿ ಡೆಂಘಿ ಜ್ವರಕ್ಕೆ ಒಳಗಾಗಿದ್ದು, ಈವರೆಗೂ ಒಟ್ಟೂ ಪ್ರಕರಣಗಳ ಸಂಖ್ಯೆ 3,384ಕ್ಕೆ ಏರಿಕೆಯಾಗಿದೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ 585, ಉಡುಪಿ 356, ಮೈಸೂರು 349, ದಕ್ಷಿಣ ಕನ್ನಡದಲ್ಲಿ 176, ಚಿತ್ರದುರ್ಗ 163, ಶಿವಮೊಗ್ಗ 158, ಹಾಸನ 124, ದಾವಣಗೆರೆ 114, ವಿಜಯಪುರ 110, ಬೆಳಗಾವಿ 103, ಕಲಬುರಗಿ 101, ಕೊಪ್ಪಳ 100 ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡೆಂಘಿ ಪ್ರಕರಣಗಳು ವರದಿಯಾಗಿವೆ. 18 ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ಎರಡಂಕಿ ಇದ್ದು, ಬೀದರ್ ಜಿಲ್ಲೆಯಲ್ಲಿ ಮಾತ್ರ ಒಂದಂಕಿ ಇದೆ.

ನಿರಂತರ ಮಳೆಯಿಂದಾಗಿ ರಾಜ್ಯದಲ್ಲಿ ಹೆಚ್ಚಿನ ಜನರಲ್ಲಿ ಡೆಂಘಿ ಜ್ವರ ಕಾಣಿಸಿಕೊಳ್ಳುತ್ತಿದ್ದು, ಈ ವರ್ಷ (ಜ.1 ರಿಂದ ಜೂ. 24ರವರೆಗೆ) 62,357 ಡೆಂಘಿ ಶಂಕಿತರನ್ನು ಗುರುತಿಸಿ, ತಪಾಸಣೆಗೆ ಒಳಪಡಿಸಲಾಗಿದೆ. 26,719 ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ. 3,384 ಮಂದಿಯಲ್ಲಿ ಜ್ವರ ಕಾಣಿಸಿಕೊಂಡಿದೆ. ಆದರೆ ಯಾವುದೇ ಸಾವು ಸಂಭವಿಸಿಲ್ಲ. 2021 ರಲ್ಲಿ 7,189 ಮಂದಿ ಡೆಂಘಿ ಜ್ವರದಿಂದ ಬಳಲಿದ್ದು, ಅವರಲ್ಲಿ ಐವರು ಮೃತಪಟ್ಟಿದ್ದರು.

ಹೆಚ್ಚಿದ ಚಿಕೂನ್ಯ ಗುನ್ಯಾ

ಡೆಂಘಿ ಜತೆಗೆ ಚಿಕೂನ್ಯ ಗುನ್ಯಾ ಪ್ರಕರಣಗಳು ಸಹ ಹೆಚ್ಚಾಗಿದ್ದು, ವಿಜಯಪುರದಲ್ಲಿ 134, ಕೋಲಾರದಲ್ಲಿ 100, ಬೆಂಗಳೂರು ಗ್ರಾಮಾಂತರದಲ್ಲಿ 54, ಹಾಸನ 53, ಚಿತ್ರದರ್ಗು 50, ತುಮಕೂರು 45, ಶಿವಮೊಗ್ಗ 43, ಉಳಿದಂತೆ 12 ಜಿಲ್ಲೆಗಳಲ್ಲಿ ಈ ಸಂಖ್ಯೆ 40 ರಿಂದ 10ರೊಳಗಿದ್ದು, 10 ಜಿಲ್ಲೆಗಳಲ್ಲಿ ಒಂದಂಕಿ ಇವೆ. ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ.