ಜಿಲ್ಲೆ

‘ಅಮ್ಮಾ ಭಯವಾಗ್ತಿದೆ, ಬೇಗ ಬಾ...ಎಲ್ಲಾ ಸೇರಿ ಸಾಯಿಸ್ತಾರೆ’ ಎಂದು ಕರೆ ಮಾಡಿದ್ದ ಮರುಕ್ಷಣವೇ ಶವವಾದ ಮಹಿಳೆ!

ನೆಲಮಂಗಲ (ಬೆಂಗಳೂರು ಗ್ರಾಮಾಂತರ): ವರದಕ್ಷಿಣೆಗಾಗಿ ಮಹಿಳೆಯೊಬ್ಬರು ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯಲ್ಲಿ ನಡೆದಿದೆ.

30 ವರ್ಷದ ರೇಖಾ ಎಂಬುವವರು ಕೊಲೆಯಾಗಿದ್ದು, ಗಂಡನ ಮನೆಯವರೆಲ್ಲಾ ಸೇರಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ತುಮಕೂರು ತುಮಕೂರು ಜಿಲ್ಲೆಯ ದಿಬ್ಬೂರು ಗ್ರಾಮದ ರೇಖಾ ಅವರನ್ನು 12 ವರ್ಷಗಳ ಹಿಂದೆ ದಾಬಸ್‌ಪೇಟೆಯ ಗಿರೀಶ್ ಜತೆ ಮದುವೆ ಮಾಡಿಕೊಡಲಾಗಿದೆ. ಮದುವೆಯಾದ ದಿನದಿಂದಲೂ ವರದಕ್ಷಿಣೆಗಾಗಿ ಪ್ರತಿನಿತ್ಯ ರೇಖಾರಿಗೆ ಕಿರುಕುಳ ನೀಡಲಾಗುತ್ತಿತ್ತು. ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ಕೊಡಲಾಗುತ್ತಿತ್ತು.

ಈ ಬಗ್ಗೆ ರೇಖಾ ತಾಯಿಯ ಜತೆಯೂ ನೋವು ಹಂಚಿಕೊಂಡಿದ್ದರು ಎನ್ನಲಾಗಿದೆ. ಎರಡು ವರ್ಷಗಳಿಂದ ಈ ಹಿಂಸೆ ಹೆಚ್ಚಾಗಿತ್ತು. ಮಂಗಳವಾರ ಮನೆಯಲ್ಲಿ ಹಲ್ಲೆ ಮಾಡಿದಾಗ ಎಲ್ಲರೂ ಸೇರಿ ತಮ್ಮನ್ನು ಕೊಲೆ ಮಾಡಿಬಿಡುತ್ತಾರೆ ಎಂದು ರೇಖಾ ಅಂದುಕೊಂಡಿದ್ದರು.

ಆದ್ದರಿಂದ ಅವರು ತಾಯಿಗೆ ಕರೆ ಮಾಡಿ, ಅತ್ತಿದ್ದಾರೆ. ಅಮ್ಮಾ ಬೇಗ ಬಾ, ನನ್ನನ್ನು ಎಲ್ಲರೂ ಸೇರಿಸಿ ಸಾಯಿಸಿಯೇ ಬಿಡುತ್ತಾರೆ ಎಂದಿದ್ದಾರೆ. ಆಗ ತಾಯಿ ಹೆದರಬೇಡ, ನಾವೆಲ್ಲ ಸೇರಿ ಮಾತನಾಡುತ್ತೇವೆ, ಧೈರ್ಯಗೆಡಬೇಡ, ನಾನು ಬರುವವರೆಗೆ ನಿಶ್ಚಿಂತೆಯಿಂದ ಇರು ಎಂದಿದ್ದಾರೆ. ಆದರೆ ಅವರು ಬರುವಷ್ಟರಲ್ಲಿಯೇ ರೇಖಾ ರಕ್ತಸಿಕ್ತವಾಗಿ ಶವವಾಗಿ ಬಿದ್ದಿದ್ದಾರೆ!

ಸದ್ಯ ಗಂಡನ ಮನೆಯವರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.