ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ ಮತ್ತು ವಿಡಿಯೋ ಚಿತ್ರೀಕರಣವನ್ನು ನಿಷೇಧಿಸಲಾಗಿದೆ ಎಂದು ಸರ್ಕಾರ ನಿನ್ನೆ (ಜುಲೈ 15) ಮಧ್ಯಾಹ್ನ ಆದೇಶ ಹೊರಡಿಸಿದ್ದ ಆದೇಶಕ್ಕೆ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಮಧ್ಯರಾತ್ರಿ ಸರ್ಕಾರ ಇನ್ನೊಂದು ಆದೇಶ ಹೊರಡಿಸಿ, ಮೊದಲು ಹೊರಡಿಸಿದ್ದ ಆದೇಶವನ್ನು ಹಿಂದಕ್ಕೆ ಪಡೆದುಕೊಂಡಿತ್ತು. ಆದರೆ ಈ ಆದೇಶದಲ್ಲಿ ವಿಪರೀತ ತಪ್ಪುಗಳು ಇದ್ದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅದು ಭಾರಿ ಟ್ರೋಲ್ ಆಗತೊಡಗಿದೆ.
ಮೊದಲ ಆದೇಶವನ್ನು ಹಿಂದಕ್ಕೆ ಪಡೆದು ಮಧ್ಯರಾತ್ರಿ ಸರ್ಕಾರ ಹೊರಡಿಸಿದ್ದ ಆದೇಶದಲ್ಲಿ ಇದ್ದ 3-4 ವಾಕ್ಯಗಳಲ್ಲಿಯೇ ವಿಪರೀತ ತಪ್ಪುಗಳು ನುಸುಳಿಕೊಂಡಿವೆ. ನಡಾವಳಿಯು ನಡವಳಿ ಆಗಿದ್ದರೆ, ಪ್ರಸ್ತಾವನೆ ಎನ್ನುವ ಬದಲು ಪ್ರಸತ್ತಾವನೆ, ಮೇಲೆ ಬದಲು ಮೇಲೇ, ಭಾಗ ಬದಲು ಬಾಗ, ಕರ್ನಾಟಕ ಬದಲು ಕರ್ನಾಟಾ, ಆಡಳಿತ ಬದಲು ಆಡಳಿದ ಎಂಬೆಲ್ಲಾ ತಪ್ಪುಗಳು ಆಗಿವೆ.
ಇದು ಜಾಲತಾಣದಲ್ಲಿ ಭಾರಿ ಟ್ರೋಲ್ ಆದ ಬೆನ್ನಲ್ಲೇ ಬೆಳಗ್ಗೆ ಅದರ ತಿದ್ದುಪಡಿ ಆದೇಶವನ್ನು ಸರ್ಕಾರ ಪುನಃ ಹೊರಡಿಸಿದ್ದು ತಪ್ಪುಗಳನ್ನು ಸರಿಪಡಿಸಿವೆ.
ಸರ್ಕಾರ ವಿಡಿಯೋ, ಫೋಟೋ ಬ್ಯಾನ್ ಮಾಡಲು ನೀಡಿದ್ದ ಕಾರಣ ಇದು:
ಸರ್ಕಾರಿ ನೌಕರರ ಪ್ರಾತಿನಿಧಿಕ ಸಂಸ್ಥೆಯಾಗಿರುವ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿಯೊಂದನ್ನು ಸಲ್ಲಿಸಿ, ಖಾಸಗಿ ವ್ಯಕ್ತಿಗಳು ಫೋಟೋ, ವಿಡಿಯೋ ಮಾಡದಂತೆ ನಿಷೇಧಿಸುವಂತೆ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಿತ್ತು. ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ಅವರ ಕೆಲಸ ಕಾರ್ಯಗಳ ನಿಮಿತ್ತ ಆಗಮಿಸುವುದು ಸರ್ವೆಸಾಮಾನ್ಯ. ಕೆಲವು ಖಾಸಗಿ ವ್ಯಕ್ತಿಗಳು ಕಚೇರಿ ವೇಳೆಯಲ್ಲಿ ಬಂದು ಕಚೇರಿಯ ವಿಡಿಯೋ, ಫೋಟೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದರಿಂದ ಸರ್ಕಾರದ ಘನತೆಗೆ ಕುಂದುಂಟಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿತ್ತು. ವಿಶೇಷವಾಗಿ ಮಹಿಳಾ ನೌಕರರಿಗೆ ಸಮಸ್ಯೆ ಉಂಟುಮಾಡುತ್ತಿರುವುದರಿಂದ ಎಲ್ಲ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ, ವಿಡಿಯೋ ಮಾಡದಂತೆ ನಿರ್ಬಂಧ ಮಾಡಬೇಕು ಎಂದು ಕೋರಿತ್ತು. ಇದರ ಹಿನ್ನೆಲೆಯಲ್ಲಿ ಸರ್ಕಾರ ಫೋಟೋ/ ವಿಡಿಯೋ ಬ್ಯಾನ್ ಮಾಡಲಾಗಿದೆ ಎಂದು ಸರ್ಕಾರ ಹೇಳಿತ್ತು. ಆದರೆ ನಂತರ ಭಾರಿ ಆಕ್ರೋಶದ ಹಿನ್ನೆಲೆಯಲ್ಲಿ ಅದನ್ನು ಮಧ್ಯರಾತ್ರಿ ವಾಪಸ್ ಪಡೆದಿತ್ತು.
ಈ ಆದೇಶವನ್ನು ತಮ್ಮ ಗಮನಕ್ಕೆ ತಾರದೇ ಹೊರಡಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟನೆ ನೀಡಿದ್ದರು. ಹೆಣ್ಣುಮಕ್ಕಳ ಘನತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಆದೇಶ ತರಲಾಗಿತ್ತು. ಆದರೆ ಇದನ್ನು ವಾಪಸ್ ಪಡೆಯಲಾಗಿದೆ ಎಂದಿದ್ದರು.
ಮಧ್ಯರಾತ್ರಿ ಹೊರಟಿದ್ದ ಆದೇಶ ಹಾಗೂ ಹೊಸದಾಗಿ ತಿದ್ದುಪಡಿ ಮಾಡಿದ ಆದೇಶದ ಪ್ರತಿಗಳು ಇಲ್ಲಿವೆ: