ಕಲಬುರಗಿ: ಹಿಜಾಬ್ ವಿವಾದದ ಕುರಿತು ಉದ್ದೇಶಪೂರ್ವಕವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಪ್ಪು ಮಾಹಿತಿ ನೀಡುತ್ತಾ ಕೋಮು ಸೌಹಾರ್ದವನ್ನು ಕದಡಿಸುವ ಪ್ರಯತ್ನ ಮಾಡಿ ಬಹುತೇಕ ಯಶಸ್ವಿಯಾಗಿದ್ದಾರೆ ಹಲವರು. ಪರಿಸ್ಥಿತಿ ಹೀಗಿರುವಾಗ ಹಿಜಾಬ್ ತಂಟೆಗೆ ಬಂದರೆ ತುಂಡು ತುಂಡು ಮಾಡೋದಾಗಿ ಹೇಳಿದವರು ಕಲಬುರಗಿಯ ಕಾಂಗ್ರೆಸ್ ಮುಖಂಡ ಮುಕ್ರಂಖಾನ್.
ಪ್ರಚೋದನಕಾರಿ ಭಾಷಣ, ಕೋಮು ಸೌಹಾರ್ದತೆ ಕದಡುವ ನಿಟ್ಟಿನಲ್ಲಿ ಹೇಳಿಕೆ ಹಿಜಾಬ್ ಸಂಘರ್ಷವನ್ನು ಇನ್ನಷ್ಟು ಉಗ್ರ ಸ್ವರೂಪಕ್ಕೆ ತಳ್ಳುವ ಪ್ರಯತ್ನ ಮಾಡಿದ್ದ ಇವರ ಮೇಲೆ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಾಗ್ತಿದ್ದಂತೆಯೇ ಇವರು ಎಸ್ಕೇಪ್ ಆಗಿದ್ದಾರೆ.
ಮುಕ್ರಂಖಾನ್ ಹೇಳಿಕೆ ಖಂಡಿಸಿ ಹಿಂದೂಪರ ಸಂಘಟನೆಗಳು ಠಾಣೆಯ ಮುಂದೆ ಪ್ರತಿಭಟನೆ ಮಾಡಿದ್ದ ಹಿನ್ನೆಲೆಯಲ್ಲಿ ಕಲಬುರಗಿ ಎಸ್ಪಿ ಇಶಾ ಪಂತ್ ಮುಕ್ರಂಖಾನ್‌ನನ್ನು ಬಂಧಿಸಲು 24 ಗಂಟೆ ಕಾಲಾವಕಾಶ ಕೇಳಿದ್ದರು. ಇದರಿಂದ ಪ್ರತಿಭಟನೆ ವಾಪಸ್ ಪಡೆದುಕೊಳ್ಳಲಾಗಿತ್ತು. ಇದೀಗ 24 ಗಂಟೆ ಮುಗಿದು ಮೂರು ದಿನಗಳಾದರೂ ಪೊಲೀಸರು ಮೌನವಾಗಿದ್ದಾರೆ. ಇದು ಹಲವರನ್ನು ಕೆರಳಿಸಿದ್ದು, ಪೊಲೀಸ್ ಇಲಾಖೆಯ ಮೇಲೆಯೇ ಅನುಮಾನ ಶುರು ಮಾಡಿದ್ದಾರೆ.
ಇಂದು ಕಲಬುರಗಿ ಎಸ್ಪಿ ಕಚೇರಿ ಮುಂದೆ ಶ್ರೀರಾಮಸೇನೆ ಮತ್ತೆ ಪ್ರತಿಭಟನೆ ನಡೆಸಲು ನಿರ್ಧರಿಸಿತ್ತು. ಕಲಬುರಗಿ ಜಿಲ್ಲಾ ಪೊಲೀಸರ ನಿರ್ಲಕ್ಷ್ಯ ಖಂಡಿಸಿ ಶ್ರೀ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುವುದಿತ್ತು. ಆದರೆ ಪುನಃ ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ ಮತ್ತು ಸೇಡಂ ಸಿಪಿಐ ಮನವಿ ಮೇರೆಗೆ ಪ್ರತಿಭಟನೆ ಕೈಬಿಡಲಾಗಿದ್ದು, ಇಂದು ರಾತ್ರಿಯ ಒಳಗೆ ಮುಕ್ರಂಖಾನ್‌ನನ್ನು ಬಂಧಿಸುವುದಾಗಿ ಆಶ್ವಾಸನೆ ಸಿಕ್ಕಿದೆ.
ಆದರೆ ಪೊಲೀಸ್ ಇಲಾಖೆಯ ಈ ನಡವಳಿಕೆ ಜನಸಾಮಾನ್ಯರಲ್ಲಿ ಹಲವು ಅನುಮಾನಗಳನ್ನು ಹುಟ್ಟಿಹಾಕುತ್ತಿದೆ. ಸಾಮಾನ್ಯ ಜನ ಅಪರಾಧ ಮಾಡಿದ್ರೆ ಕ್ಷಣಾರ್ಧದಲ್ಲಿ ಒದ್ದು ಒಳಹಾಕುವ ಪೊಲೀಸರು ಪ್ರಭಾವಿ ನಾಯಕನ ಬಂಧನಕ್ಕೆ ಯಾಕಿಷ್ಟು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಹಿಂದೂ ಪರ ಸಂಘಟನೆಗಳು ಪ್ರಶ್ನಿಸುತ್ತಿವೆ.