ಜಿಲ್ಲೆ

ಬೆಳಗಾವಿಯಲ್ಲಿ ಚಿರತೆ ಪ್ರತ್ಯಕ್ಷ! ಕಟ್ಟಡ ಕಾರ್ಮಿಕನ ಮೇಲೆ ಅಟ್ಯಾಕ್​, ಎಲ್ಲೆಡೆ ಆತಂಕ

suchetana

ಬೆಳಗಾವಿ: ಇಲ್ಲಿನ ಜಾಧವ ನಗರದಲ್ಲಿ ಶುಕ್ರವಾರ ಬೆಳಗ್ಗೆ ಚಿರತೆ ಪ್ರತ್ಯೆಕ್ಷವಾಗಿದ್ದು, ನಿವಾಸಿಗಳಲ್ಲಿ ಆತಂಕ ಉಂಟು ಮಾಡಿದೆ. ಮತ್ತೊಂದೆಡೆ‌ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಸಿದ್ರಸಯಿ ನೀಲಜಕರ ಎಂಬ ಕಾರ್ಮಿಕನ ಮೇಲೆ ದಾಳಿ ಮಾಡಿ ಹೋಗಿದೆ. ಚಿರತೆ ದಾಳಿಯಿಂದ ಕಟ್ಟಡ ಕಾರ್ಮಿಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಕಳೆದ ನಾಲ್ಕೈದು ದಿನಗಳ ಅವಧಿಯಲ್ಲಿ ಜಿಲ್ಲೆಯ ‌ಕೃಷಿ ಜಮೀನುಗಳಲ್ಲಿ ಎರಡು ಬಾರಿ ಚಿರತೆ ಪ್ರತ್ಯಕ್ಷವಾಗಿತ್ತು. ಇದೀಗ ಬೆಳಗಾವಿ‌ ಮಹಾನಗರದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.

ಜಾಧವ್ ನಗರದಲ್ಲಿರುವ ಯಶೋಧನ್ ಜಾಧವ್ ಮನೆಯ ಸಿಸಿ ಕ್ಯಾಮೆರಾದಲ್ಲಿ ಚಿರತೆ ಚಲನ ವಲನ ದೃಶ್ಯ ಸೆರೆಯಾಗಿದೆ.

ಸ್ಥಳದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಠಿಕಾಣಿ ಹೂಡಿದ್ದು, ಚಿರತೆಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಎಸ್ ಡಿಆರ್‌ಎಫ್ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರ ಸಾಥ್ ನೀಡಿದ್ದಾರೆ.

ಅದೇ ಇನ್ನೊಂದೆಡೆ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ‌ ಚಂದೂರ ಟೇಕ್ ಗ್ರಾಮದಲ್ಲಿ ರಾಜಾರೋಷವಾಗಿ ಚಿರತೆ ಓಡಾಡುತ್ತಿರುವುದು ಕಂಡುಬಂದಿದೆ.

ಕಳೆದ ಒಂದು ವಾರದಿಂದ ಚಿರತೆ ಸೆರೆಗೆ ಬಲೆ ಹಾಕಿ ಅರಣ್ಯ ಇಲಾಖೆ ಕುಳಿತಿದ್ದರೂ, ಚಿರತೆ ತಪ್ಪಿಸಿಕೊಳ್ಳುತ್ತಿದೆ. ಚಿರತೆ ಓಡಾಟದಿಂದ ಚಂದೂರ ಟೇಕ್ ಜನ ಭಯಭೀತರಾಗಿದ್ದಾರೆ. ಚಿರತೆಯ ಓಡಾಡುವಿಕೆಯನ್ನು ರೈತರು ಮೊಬೈಲ್​ನಲ್ಲಿ ವಿಡಿಯೋ ಮಾಡಿದ್ದಾರೆ.