ಜಿಲ್ಲೆ

ಗುರೂಜಿ ಹತ್ಯೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಶಿಫ್ಟ್​: ಮೃತಪಟ್ಟ ಮೊಮ್ಮಗನಿಂದಾಗಿ ಉಳಿದಿತ್ತು ಜೀವ!

ಬೆಂಗಳೂರು: ಹುಬ್ಬಳ್ಳಿಯ ಸರಳ ವಾಸ್ತು ಚಂದ್ರಶೇಖರ ಗುರೂಜಿ ಅವರ ಹತ್ಯೆ ಮಾಡಿರುವ ಆರೋಪಿಗಳನ್ನು ಪೊಲೀಸರು ತೀವ್ರವಾಗಿ ವಿಚಾರಿಸುತ್ತಿದ್ದು, ಒಂದೊಂದೇ ಸ್ಫೋಟಕ ಮಾಹಿತಿ ಹೊರಬರುತ್ತಿದೆ.

ಗುರೂಜಿ ಅವರನ್ನು ಬೆಂಗಳೂರಿನಲ್ಲಿಯೇ ಮುಗಿಸಲು ಆರೋಪಿ ಮಹಾಂತೇಶ್​ ಟೀಂ ಪ್ಲ್ಯಾನ್​ ಮಾಡಿಕೊಂಡಿದ್ದರು. ಇದೇ ತಿಂಗಳು 3ನೇ ತಾರೀಖಿನಂದು ಅವರ ಕೊಲೆಗೆ ಸ್ಕೆಚ್​ ರೆಡಿಯಾಗಿತ್ತು. ಆದರೆ ಗುರೂಜಿ ಅಂದು ತಪ್ಪಿಸಿಕೊಂಡಿದ್ದರು. ಏಕೆಂದರೆ ಅವರ ಮೊಮ್ಮಗ ತೀರಿಕೊಂಡಿದ್ದ. ಇದರಿಂದ ಅಲ್ಲಿಗೆ ಹೋಗಬೇಕಿರುವ ಹಿನ್ನೆಲೆಯಲ್ಲಿ ಗುರೂಜಿ ಕಾರ್ಯಕ್ರಮವನ್ನು ರದ್ದು ಮಾಡಿದ್ದರು.

ನಂತರ ಹುಬ್ಬಳ್ಳಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಬೆಂಗಳೂರಿನಲ್ಲಿ ಆಗದ್ದನ್ನು ಹುಬ್ಬಳ್ಳಿಯಲ್ಲಿ ಮಾಡಿ ಮುಗಿಸುವ ಪ್ಲ್ಯಾನ್​ ಮಾಡಿದ್ದ ಆರೋಪಿಗಳು ಬೆಂಗಳೂರಿನಿಂದ ನೇರವಾಗಿ ಹುಬ್ಬಳ್ಳಿಗೆ ಬಂದು ಹೋಟೆಲ್​ನಲ್ಲಿ ಉಳಿದುಕೊಂಡಿದ್ದರು. ಕೊಲೆಗೂ ಮುನ್ನ ಗುರೂಜಿಯನ್ನು ಎರಡು ಬಾರಿ ಭೇಟಿಯಾಗಿದ್ದ ಮಹಾಂತೇಶ್. ಜುಲೈ 3 ರಂದು ಗೋಕುಲ ರಸ್ತೆಯ ಗುರೂಜಿ ಅಪಾರ್ಟ್‌ಮೆಂಟ್ ಮೊದಲು ಭೇಟಿಯಾಗಿದ್ದ. ಗುರೂಜಿ ಕುಟುಂಬಸ್ಥರ ಸಮ್ಮುಖದಲ್ಲಿ ಭೇಟಿಯಾಗಿ ಸುಮಾರು 20 ನಿಮಿಷ ಮಾತುಕತೆ ನಡೆಸಿದ್ದ. ಆದರೆ ಯಾರಿಗೂ ಹತ್ಯೆಯ ಸುಳಿವು ಸಿಕ್ಕಿರಲಿಲ್ಲ.

ನಂತರ ಕೊಲೆಯಾಗುವ ಒಂದು ದಿನ ಮುಂಚೆ ಅಂದರೆ ಜುಲೈ 4ರಂದು ಕೊಲೆಯಾದ ಪ್ರೆಸಿಡೆಂಟ್ ಹೋಟೆಲ್​ನಲ್ಲಿ ಲಾಂಜ್ ನಲ್ಲಿ‌ ಭೇಟಿಯಾಗಿ ಮಾತುಕತೆ ನಡೆಸಲಾಗಿತ್ತು. ತನಗೆ ಕೊಡುವುದಾಗಿ ಹೇಳಿದ್ದ 60 ಲಕ್ಷ ರೂಪಾಯಿ ಹಣ, ಹಾಗೂ ಫ್ಲ್ಯಾಟ್​ ಕೊಡಿ‌ ಎಂದು ಮಹಾಂತೇಶ್ ಕೇಳಿದ್ದ. ಆದರೆ ಹಣ ಕೊಡುವುದಿಲ್ಲ ಎಂದು ಏಕವಚನದಲ್ಲಿ‌ ಗುರೂಜಿ ನಿಂದಿಸಿದ್ದರು. ಇದರಿಂದ ಕೋಪಗೊಂಡು ತಾನು ಈ ಕೃತ್ಯ ಎಸಗಿರುವುದಾಗಿ ಆರೋಪಿ ಬಾಯಿ ಬಿಟ್ಟಿದ್ದಾನೆ.