ಬೆಂಗಳೂರು: ಅತ್ಯಾಚಾರ ಕೇಸ್ನಲ್ಲಿ ಸಿಲುಕಿ ನಂತರ ಇದ್ದಕ್ಕಿದ್ದಂತೆಯೇ ಕಣ್ಮರೆಯಾಗಿ ತನ್ನದೇ ಕೈಲಾಸ ಸೃಷ್ಟಿಸಿಕೊಂಡಿರುವ ಕುತೂಹಲದ ವ್ಯಕ್ತಿ ಎಂದರೆ ನಿತ್ಯಾನಂದ. ಈತನಿಗೆ ಶಿಷ್ಯ ವರ್ಗ ಅದರಲ್ಲಿಯೂ ಶಿಷ್ಯೆಯಂದಿರು ಅಪಾರ ಪ್ರಮಾಣದಲ್ಲಿದ್ದು, ಕೈಲಾಸದಲ್ಲಿಯೂ ಹಲವಾರು ಶಿಷ್ಯೆಯರನ್ನು ಹೊಂದಿದ್ದಾನೆ ಎನ್ನಲಾಗಿದೆ.
ಆಗಾಗ್ಗೆ ಕೈಲಾಸದಿಂದಲೇ ಚಿತ್ರ- ವಿಚಿತ್ರ ವೇಷ ಭೂಷಣದೊಂದಿಗೆ ಸಂದೇಶವನ್ನೂ ಕಳಿಸುತ್ತಿರುವ ಈ ಸ್ವಯಂಘೋಷಿತ 'ದೇವಮಾನವ'ನ ವಿರುದ್ಧ ಈಗ ಮತ್ತೆ ಅತ್ಯಾಚಾರದ ಆರೋಪ ಕೇಳಿಬಂದಿದೆ. ಅದೂ ಕೈಲಾಸದಿಂದಲೇ ಈ ಆರೋಪ ಕೇಳಿಬಂದಿದೆ!
ಕೈಲಾಸದಲ್ಲಿ ಈತ ಕಳ್ಳಾಟ ಆಡುತ್ತಿದ್ದಾನೆ ಎಂದು ಆತನ ವಿದೇಶಿ ಶಿಷ್ಯೆಯೊಬ್ಬಳು ಇಮೇಲ್ ಮೂಲಕವೇ ರಾಮನಗರದ ಬಿಡದಿ ಠಾಣೆ ಪೊಲೀಸರಿಗೆ ದೂರನ್ನೂ ದಾಖಲು ಮಾಡಿದ್ದು, ಈ ಬಗ್ಗೆ ತನ್ನ ಟ್ವಿಟ್ಟರ್ ಖಾತೆಯಲ್ಲಿಯೂ ಬರೆದುಕೊಂಡಿದ್ದಾಳೆ.
ಸಾರಾ ಲಾಂದ್ರಿ ಎಂಬಾಕೆ ಈ ಆರೋಪ ಮಾಡಿದ್ದು, ಕೈಲಾಸದಲ್ಲಿ ನಿತ್ಯಾನಂದ ಹಾಗೂ ಆತನ ಶಿಷ್ಯವೃಂದದವರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆಕೆ ಆರೋಪಿಸಿದ್ದಾಳೆ. ಇದ್ದಾರೆ ಅಂತ ಸಾರಾ ಲಾಂದ್ರಿ ಗಂಭೀರ ಆರೋಪ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಡದಿ ಪೊಲೀಸರು, ಈ ರೀತಿ ಇ-ಮೇಲ್ ದೂರನ್ನು ಪಡೆದುಕೊಳ್ಳಲು ಆಗದು. ಆದ್ದರಿಂದ ದಯವಿಟ್ಟು ಯಾವುದೇ ಭಯ, ಅಂಜಿಕೆ ಇಲ್ಲದೇ ಭಾರತದ ಯಾವುದಾದರೂ ಪೊಲೀಸ್ ಠಾಣೆಗೆ ಖುದ್ದಾಗಿ ಹೋಗಿ ದೂರು ದಾಖಲಿಸುವಂತೆ ಹೇಳಿರುವ ಪತ್ರವೂ ವೈರಲ್ ಆಗುತ್ತಿದೆ.