ಜಿಲ್ಲೆ

ಸಚಿವ ಅಶೋಕ್‌ ಪಿ.ಎ ಲಂಚ ಕೇಳಿದ್ರು, ನನ್ ಬಳಿ ಆಡಿಯೋ ಇದೆ ಎಂದ ಸಬ್‌ ರಿಜಿಸ್ಟ್ರಾರ್‌ ಹೀಗೂ ಹೇಳಿದ್ರು...

suchetana

ಚಿಕ್ಕಮಗಳೂರು: ಕಂದಾಯ ಸಚಿವ ಆರ್. ಅಶೋಕ್ ಅವರ ಆಪ್ತ ಕಾರ್ಯದರ್ಶಿ ಗಂಗಾಧರ್ ಅವರ ವಿರುದ್ಧ ಲಂಚ ಆರೋಪ ಕೇಳಿಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಅವರು ಗಂಗಾಧರ್ ವಿರುದ್ಧ ಆರೋಪ ಮಾಡಿದ್ದಾರೆ.

ಲಂಚ ಕೇಳಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಆಡಿಯೋ ಇದೆ ಎಂದಿರುವ ಚೆಲುವರಾಜ್‌, ಈ ಕುರಿತು ಶೃಂಗೇರಿ ಠಾಣೆಗೆ ದೂರು ನೀಡಿದ್ದಾರೆ. ಜತೆಗೆ, ಈ ಆರೋಪ ಮಾಡಿರುವ ಕಾರಣ ತಮಗೆ ಪೊಲೀಸ್‌ ರಕ್ಷಣೆಯೂ ಬೇಕಿದೆ ಎಂದು ಅವರು ಹೇಳಿದ್ದಾರೆ.

ಇದರ ಜತೆಗೆನೇ, ಈ ವ್ಯಕ್ತಿ ತಮ್ಮನ್ನು ಕಂದಾಯ ಸಚಿವರ ಪಿಎ ಎಂದು ಹೇಳಿಕೊಂಡಿದ್ದಾರೆ. ಆದರೆ ಅವರು ನಿಜವಾಗಿಯೂ ಪಿ.ಎ ಹೌದೋ ಅಲ್ಲವೋ ಎಂದೂ ಗೊತ್ತಿಲ್ಲ. ಆದ್ದರಿಂದ ಈ ಬಗ್ಗೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಸ್ಪಷ್ಟಪಡಿಸಿರುವುದಾಗಿಯೂ ಹೇಳಿದರು.

ಇದೇ 24ರಂದು ಅಶೋಕ್‌ ಅವರು ಚಿಕ್ಕಮಗಳೂರಿನ ಪ್ರವಾಸದಲ್ಲಿ ಇದ್ದರು. ಆಗ ನಾನು ಸಚಿವ ಅಶೋಕ್‌ ಅವರ ಪಿಎ ಗಂಗಾಧರ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬರು ನನಗೆ ಕರೆ ಮಾಡಿ ಸಚಿವರು ಬರುವ ವಿಷಯ ತಿಳಿಸಿದ್ದರು. ಆದ್ದರಿಂದ ನಾನು ಶೃಂಗೇರಿಯ ಆದಿಚುಂಚನಗಿರಿ ಸಭಾ ಭವನಕ್ಕೆ ಹೋಗಿದ್ದೆ. ಶೃಂಗೇರಿಗೆ ಬಂದಾಗ ಪೊಲೀಸರೂ ಆ ವ್ಯಕ್ತಿಯನ್ನು ಕಂದಾಯ ಸಚಿವರ ಪಿಎ ಎಂದು ಪರಿಚಯಿಸಿದ್ದರು. ಆದರೆ ಅವರನ್ನು ನಾನು ಮೊದಲು ನೋಡಿರದ ಕಾರಣ, ಅವರನ್ನು ಸಚಿವರ ಪಿಎ ಎಂದುಕೊಂಡಿದ್ದೇನೆ ಎಂದು ಚೆಲುವರಾಜ್‌ ಹೇಳಿದ್ದಾರೆ.

ಹೀಗೆ ಬಂದ ಸಮಯದಲ್ಲಿ, ಒಂದು ಫೈಲ್‌ಗೆ ಸಂಬಂಧಿಸಿದಂತೆ ಅವರು ನನ್ನನ್ನು ಒಂದು ಕಡೆ ಕರೆದುಕೊಂಡು ಹೋಗಿ ಲಂಚ ಕೊಡಲು ಹೇಳಿದರು. ಆದರೆ ನಾನು ಒಪ್ಪಲಿಲ್ಲ ಎಂದು ಚೆಲುವರಾಜ್‌ ಹೇಳಿದ್ದು, ಇವರು ನಿಜವಾಗಿಯೂ ಕಂದಾಯ ಸಚಿವರ ಪಿಎ ಹೌದಾ ಅಥವಾ ಬೇರೆಯವರೋ ಗೊತ್ತಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.