ಬೆಂಗಳೂರು: ಸಾರಿಗೆ ಸಿಬ್ಬಂದಿ ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮೇ 4ರ ಬಳಿಕ ಮಾತುಕತೆಗೆ ಸಿದ್ಧವಿದೆ. ಹೀಗಾಗಿ ಸಾರಿಗೆ ನೌಕರರು ಯಾವುದೇ ರಾಜಕೀಯ ಆಟದ ದಾಳವಾಗಬಾರದು. ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೋರಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಾರಿಗೆ ಖಾತೆ ಹೊಂದಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಈಗಾಗಲೇ ವಸ್ತುಸ್ಥಿತಿ ವಿವರಿಸಿ, ಚುನಾವಣೆ ನೀತಿ ಸಂಹಿತೆ ತೆರವಾದ ಬಳಿಕ ವೇತನ ಪರಿಷ್ಕರಣೆಗೆ ಸಿದ್ಧವೆಂದಿದ್ದಾರೆ. ಬೇಡಿಕೆ ಕುರಿತು ಚರ್ಚೆಗೂ ಸಮ್ಮತಿಸಿದ್ದು, ಅವರ ಮಾತಿನ ಮೇಲೆ ವಿಶ್ವಾಸವಿಟ್ಟು, ಮುಷ್ಜರದಿಂದ ಹಿಂದೆ ಸರಿದು, ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಿ.ಟಿ.ರವಿ ಸಲಹೆ ನೀಡಿದರು.
ರಾಜಿಸಂಧಾನ ಗೊತ್ತಿಲ್ಲ
ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ಪ್ರವಾಸದ ವೇಳೆ ಸಿಎಂ ಬಿಎಸ್ ವೈ ಹಾಗೂ ಸಚಿವ ಈಶ್ವರಪ್ಪ ನಡುವೆ ರಾಜಿಸಂಧಾನದ ಮಾತುಕತೆ ನಡೆಸಲಿದ್ದಾರೆಯೆ ಎನ್ನುವುದು ಗೊತ್ತಿಲ್ಲ. ಈಶ್ವರಪ್ಪ ವರಿಷ್ಠರಿಗೆ ಮತ್ತೊಂದು ಪತ್ರ ಬರೆಯಲಿದ್ದಾರೆ ಎಂಬ ಊಹಾಪೋಹದ ಪ್ರಶ್ನೆಗೆ ಉತ್ತರಿಸುವುದಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಲು ಸಿ.ಟಿ.ರವಿ ನಿರಾಕರಿಸಿದರು.
3 ಕ್ಷೇತ್ರಗಳ ಉಪ ಚುನಾವಣೆಗೆ ಎಲ್ಲ ಸಚಿವರು, ಮುಖಂಡರಿಗೆ ನಿರ್ದಿಷ್ಟವಾದ ಜವಾಬ್ದಾರಿ ನೀಡಿದ್ದು, ಎಲ್ಲರೂ ಆಸಕ್ತಿಯಿಂದ ಭಾಗವಹಿಸಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಪ್ರಚಾರದಿಂದ ದೂರವಿರುವ ಬಗ್ಗೆ ವೈಯಕ್ತಿಕ ಮಾಹಿತಿಯಿಲ್ಲ. ತಮಿಳಿನಾಡಿನಿಂದ ನಿನ್ನೆಯಷ್ಟೇ ವಾಪಸ್ಸಾಗಿರುವೆ ಎಂದು ಸಿ.ಟಿ.ರವಿ ಉತ್ತರಿಸಿದರು.