ಮೈಸೂರು: ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಮನೆ ಮುಂದೆ ಬೈಕ್ ನಿಲ್ಲಿಸುವ ಸಾರ್ವಜನಿಕರು ಎಚ್ಚರ ವಹಿಸಬೇಕಾದ ಕಾಲ ಬಂದಿದೆ. ಏಕೆಂದರೆ ಬೈಕ್ ಕಳ್ಳತನ ಮಾಡಿದರೆ ಸಿಕ್ಕಿಬೀಳುವ ಸಾಧ್ಯತೆ ಇರುವ ಕಾರಣ, ಇದೀಗ ಖದೀಮರು ಪೆಟ್ರೋಲ್‌ಗೆ ಕನ್ನ ಹಾಕುತ್ತಿದ್ದಾರೆ.
ಮನೆ ಮುಂದೆ ನಿಂತಿರುವ ಬೈಕ್‌ಗಳಲ್ಲಿ ಪೆಟ್ರೋಲ್ ಕಳ್ಳತನ ಮಾಡುತ್ತಿದ್ದ ಮೈಸೂರಿನ ಖದೀಮರ ಗುಂಪಿನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೈಸೂರಿನ ಕೆಲವು ಭಾಗಗಳಲ್ಲಿ ಪ್ರತಿನಿತ್ಯ ಪೆಟ್ರೋಲ್ ಕಳ್ಳತನವಾಗುತ್ತಿತ್ತು. ನಂತರ ಈ ಬಗ್ಗೆ ಸಿಸಿಟಿವಿ ಪರಿಶೀಲನೆ ಮಾಡಿದಾಗ ದೃಶ್ಯ ಕಂಡುಬಂದಿದೆ.
ಮೈಸೂರಿನ ಗಾಯತ್ರಿಪುರಂನಲ್ಲಿ ರಾತ್ರಿ ವೇಳೆ ಪೆಟ್ರೋಲ್ ಕಳ್ಳತನ ಮಾಡುತ್ತಿದ್ದ ಗ್ಯಾಂಗ್‌ನ ಕೃತ್ಯ ಇದರಲ್ಲಿ ದಾಖಲಾಗಿದೆ. ಒಂದೇ ರಾತ್ರಿ ಸುಮಾರು 10ರಿಂದ 15 ಬೈಕ್‌ಗಳ ಪೆಟ್ರೋಲ್ ಅನ್ನು ಕಳ್ಳರು ಕದ್ದಿದ್ದಾರೆ. ಮನೆಯೊಳಗೆ ಬೈಕ್ ನಿಲ್ಲಿಸಲು ಜಾಗವಿಲ್ಲದ ಕಾರಣ ಅನಿವಾರ್ಯವಾಗಿ ಹೊರಗಡೆ ನಿಲ್ಲಿಸಬೇಕಿದೆ. ಆದರೆ ಕಳ್ಳರ ಕೃತ್ಯದಿಂದ ಸಾರ್ವಜನಿಕರ ನಿದ್ದೆಗೆಟ್ಟಿದೆ. ಪ್ರತಿನಿತ್ಯ ಪೆಟ್ರೋಲ್ ಕಳ್ಳತನದಿಂದ ರೋಸಿ ಹೋಗಿದ್ದಾರೆ ನಿವಾಸಿಗಳು. ಈ ಬಗ್ಗೆ ಪೊಲೀಸರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸಿಸಿ ಕ್ಯಾಮರಾ ಇದ್ರೂ ಎಗ್ಗಿಲ್ಲದೇ ಪ್ರೆಟೋಲ್ ಕದಿಯಲಾಗುತ್ತಿದ್ದು, ಕೂಡಲೇ ಈ ಬಗ್ಗೆ ಅಗತ್ಯ ಕ್ರಮ ವಹಿಸುವಂತೆ ಸಾರ್ವಜನಿಕರ ಒತ್ತಾಯ ಮಾಡಿದ್ದಾರೆ. ಇಲ್ಲಿ ಸಿಸಿಟಿವಿಯಿಂದ ದೃಶ್ಯವೇನೋ ಬಯಲಾಗಿದೆ. ಆದರೆ ಎಷ್ಟೋ ನಗರಗಳಲ್ಲಿ, ಊರುಗಳಲ್ಲಿ, ರಸ್ತೆಗಳಲ್ಲಿ ಸಿಸಿಟಿವಿ ಇಲ್ಲ. ಅಂಥವರು ಗಾಡಿಯನ್ನು ಮನೆಯ ಹೊರಗೆ ನಿಲ್ಲಿಸುವ ಮೊದಲು ಜಾಗೃತರಾಗಬೇಕಿದೆ.
ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: