ಜಿಲ್ಲೆ

ಪುತ್ರನಿಗಾಗಿ ಕ್ಷೇತ್ರ ತ್ಯಾಗ ಮಾಡುತ್ತಲೇ ಬಂತೊಂದು ಗುಡ್​ನ್ಯೂಸ್​: 'ಸುಪ್ರೀಂ'ನಿಂದ ಬಿಎಸ್​ವೈಗೆ ಬಿಗ್​ ರಿಲೀಫ್​

ನವದೆಹಲಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಕ್ಷೇತ್ರವಾಗಿರುವ ಶಿಕಾರಿಪುರ ಕ್ಷೇತ್ರದಲ್ಲೇ ವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಣೆ ಮಾಡುವ ಮೂಲಕ ಅಚ್ಚರಿಯ ಹೇಳಿಕೆ ನೀಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ದೆಹಲಿಯಿಂದ ಯಡಿಯೂರಪ್ಪನವರಿಗೆ ಗುಡ್​ ನ್ಯೂಸ್​ ಸಿಕ್ಕಿದೆ.

ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. 2006-07ರ ಡಿನೋಟೀಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ಎಸ್.ಯಡಿಯೂರಪ್ಪ ವಿರುದ್ಧ ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶಿಸಿತ್ತು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ನಡೆಯುತ್ತಿರುವ ಕ್ರಿಮಿನಲ್ ವಿಚಾರಣೆಯನ್ನು ರದ್ದುಗೊಳಿಸಬೇಕು ಎಂಬ ಯಡಿಯೂರಪ್ಪ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. 2020ರ ಡಿಸೆಂಬರ್ 22ರಂದು ಹೈಕೋರ್ಟ್ ನೀಡಿದ್ದ ಆದೇಶವನ್ನು ಅವರು ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸಿದ್ದರು. ಅವರ ಮನವಿಯನ್ನು ಪುರಸ್ಕರಿಸಿರುವ ಕೋರ್ಟ್​, ತನಿಖೆಗೆ ತಡೆ ನೀಡಿದೆ.

ಏನಿದು ಘಟನೆ?

2006–07ರಲ್ಲಿ ಹಲವು ಎಕರೆ ಭೂಮಿಯನ್ನು ಅಕ್ರಮ ಡಿ–ನೋಟಿಫೈ ಮಾಡಿದ್ದಾರೆ ಎನ್ನಲಾದ ಪ್ರಕರಣ ಇದಾಗಿದೆ.

ವಾಸುದೇವ ರೆಡ್ಡಿ ಎಂಬುವವರು ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಯಡಿಯೂರಪ್ಪ ವಿರುದ್ಧ ತನಿಖೆ ನಡೆಸುವಂತೆ 2015ರ ಫೆಬ್ರುವರಿ 18ರಂದು ಲೋಕಾಯುಕ್ತ ಪೊಲೀಸರಿಗೆ ಬೆಂಗಳೂರಿನ ಜಿಲ್ಲಾ ನ್ಯಾಯಾಲಯ ನಿರ್ದೇಶನ ನೀಡಿತ್ತು. ಇದರಂತೆ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಇದನ್ನು ಅನ್ನು ರದ್ದುಗೊಳಿಸಬೇಕು ಎಂದು ಯಡಿಯೂರಪ್ಪ 2015ರ ಫೆಬ್ರುವರಿ 21ರಂದೇ ಮನವಿ ಸಲ್ಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಸಡಿಲಿಕೆ ಮಾಡಲಾಗದು ಎಂದಿದ್ದ ಹೈಕೋರ್ಟ್, ಸಾರ್ವಜನಿಕ ಸೇವಕರು, ಸಂಸದರು ಹಾಗೂ ಶಾಸಕರು ಶಾಮೀಲಾಗಿದ್ದಾರೆ ಎನ್ನಲಾದ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿ ಅಪರಾಧ ನ್ಯಾಯಾಲಯಗಳು ಆದೇಶಿಸಿರುವ ತನಿಖೆಯ ಮೇಲೆ ನಿಗಾ ಇರಿಸಿ ಎಂದು ಲೋಕಾಯುಕ್ತ ನ್ಯಾಯಾಲಯಕ್ಕೆ ನಿರ್ದೇಶಿಸಿತ್ತು. ಇದನ್ನು ಯಡಿಯೂರಪ್ಪನವರು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿದ್ದರು. (ಏಜೆನ್ಸೀಸ್​)