ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಮಾಮೂಲಿನಂತೆ ಮತ್ತೆ ಇವಿಎಂ ಮಷಿನ್ ಸದ್ದು ಮಾಡುತ್ತಿದೆ.
ಪಾಲಿಕೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ 35 ಸ್ಥಾನ ಗೆಲುವು ಸಾಧಿಸುತ್ತಿದ್ದಂತೆಯೇ ಫಲಿತಾಂಶದ ಗೊಂದಲ ಇನ್ನೂ ಬಗೆಹರಿದಿಲ್ಲ. ಪಾಲಿಕೆ ಫಲಿತಾಂಶದ ಮೇಲೆ ಮತ್ತೆ ಪರಾಜಿತ ಅಭ್ಯರ್ಥಿಗಳು ಅನುಮಾನ ಹೊರ ಹಾಕಿದ್ದು, ಬಿಜೆಪಿ ಗೆಲ್ಲಲು ಮತಯಂತ್ರವೇ ಕಾರಣ ಎಂದಿದ್ದಾರೆ.
ಪಾರದರ್ಶಕವಾಗಿ ಚುನಾವಣಾ ಆಗಿಲ್ಲ, ಫಲಿತಾಂಶ ಮೇಲೆ ನಂಬಿಕೆ ಇಲ್ಲ ಎಂದಿರುವ ಸೋತ ಅಭ್ಯರ್ಥಿಗಳು ಆರೋಪಿಸಿದ್ದಾರೆ. ಫಲಿತಾಂಶದ ಕುರಿತು ಚರ್ಚಿಸಲು ಬೆಳಗಾವಿಯ ಮರಾಠ ಮಂದಿರದಲ್ಲಿ ಸೋತ ಅಭ್ಯರ್ಥಿಗಳಿಂದ ನಿನ್ನೆ ಮಹತ್ವದ ಸಭೆ ನಡೆದಿತ್ತು. ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಅನಂತಕುಮಾರ ಬ್ಯಾಕೂಡ್, ಎಂಇಎಸ್ ನ ಮಾಜಿ ಮೇಯರ್ ಕಿರಣ್ ಸಾಯನಾಯಕ್, ಸೇರಿದಂತೆ ಆಮ್ ಆದ್ಮಿ , ಪಕ್ಷೇತರ ಸೋತ ಅಭ್ಯರ್ಥಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ಇವಿಎಂ ಮಷಿನ್‌ನಿಂದ ಎಂಇಎಸ್, ಕಾಂಗ್ರೆಸ್ ಆಮ್‌ಆದ್ಮಿ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳಿಗೆ ಅನ್ಯಾಯದ ಆಗಿದೆ ಎಂದು ಅವರು ಆರೋಪಿಸಿದರು. ಬಿಜೆಪಿ ಗೆಲ್ಲಲು ಇದೇ ಕಾರಣ, ಯಂತ್ರ ಸರಿಯಿಲ್ಲದ್ದರಿಂದ ಬಿಜೆಪಿಗೆ ಬಹುಮತ ಬಂದಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಹಿಂದಿನ ಪಾಲಿಕೆ ಸದಸ್ಯರು ಗೆಲ್ಲಬಾರದು ಎಂದು ಇವಿಎಂ ಮಷಿನ್‌ನಲ್ಲಿ ದೋಷಪೂರಕ ಮಾಡಲಾಗಿದೆ. ಕೆಲವು ಪ್ರಭಾವಿಗಳಿಂದ ಬಿಜೆಪಿಯೇತರ ಅಭ್ಯರ್ಥಿಗಳಿಗೆ ಅನ್ಯಾಯಾಗಿದೆ ಎಂದು ಸಭೆಯಲ್ಲಿ ಚರ್ಚಿಸಲಾಗಿದೆ. ಈ ಸಂಬಂಧ ಇದೀಗ ಇಂದು ಜಿಲ್ಲಾಧಿಕಾರಿಗೆ ದೂರು ನೀಡಿ ನ್ಯಾಯಾಲಯಕ್ಕೆ ಹೋಗಲು ನಿರ್ಧಾರ ಮಾಡಲಾಗಿದೆ. ಇವಿಎಂ ಯಂತ್ರದ ವಿರುದ್ಧ ಕೋರ್ಟ್ ಮೊರೆ ಹೋಗಲು ನಿರ್ಧರಿಸಲಾಗಿದೆ.
ಅದೇ ಇನ್ನೊಂದೆಡೆ, ಅತಂತ್ರವಾಗಿರುವ ಕಲಬುರಗಿ ಮಹಾ ಪಾಲಿಕೆಯಲ್ಲಿ ಜೆಡಿಎಸ್ ಕಿಂಗ್ ಮೇಕರ್ ಆಗಿದ್ದು, ಈ ಬಗ್ಗೆ ಚರ್ಚಿಸಲು ಬೆಂಗಳೂರಿನಲ್ಲಿ ಜೆಡಿಎಸ್ ನಾಲ್ವರು ಸದಸ್ಯರು ಬೀಡುಬಿಟ್ಟಿದ್ದಾರೆ.
ಇವರೆಲ್ಲರೂ ಬೆಳಗ್ಗೆ 9 ಗಂಟೆಗೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಭೇಟಿ ಮಾಡಲಿದ್ದು, ದೊಡ್ಡ ಮಟ್ಟದ ಚರ್ಚೆ ನಡೆಯಲಿದೆ. ಕುಮಾರಸ್ವಾಮಿ ಕೈಗೊಳ್ಳುವ ನಿರ್ಣಯಕ್ಕೆ ತಾವು ಬದ್ಧ ಎನ್ನುವ ಸಂದೇಶದೊಂದಿಗೆ ಭೇಟಿಗೆ ಹೊರಟಿದ್ದಾರೆ.
ಎಲ್ಲಾ ಜೆಡಿಎಸ್ ಸದಸ್ಯರು ಕುಮಾರಸ್ವಾಮಿ ಬಳಿ ಹೋಗಿ ಕುಳಿತ ಕಾರಣ ಸ್ಥಳೀಯ ತಂತ್ರಗಳಿಗೆ ಬ್ರೇಕ್ ಬಿದ್ದಿದೆ. ಈಗ ಕುಮಾರಸ್ವಾಮಿಯವರು ಯಾವ ಪಕ್ಷಕ್ಕೆ ಬೆಂಬಲ ಘೋಷಿಸುತ್ತಾರೆ ಎನ್ನುವುದು ಕುತೂಹಲ ತಾಳಿದೆ.