ಆರೋಪಿ ಹಾಗೂ ಕೊಲೆಯಾದ ಬ್ಯಾಂಕ್​ ಉದ್ಯೋಗಿ  
ಜಿಲ್ಲೆ

ಕಳ್ಳನೆಂದು ಭಾವಿಸಿ ಹೊಡೆದೇ ಬಿಟ್ಟ ಸೆಕ್ಯುರಿಟಿ! ಕರ್ತವ್ಯ ಪ್ರಜ್ಞೆ ಮೆರೆಯಲು ಹೋಗಿ ಬ್ಯಾಂಕ್​ ಉದ್ಯೋಗಿ ಮರ್ಡರ್​

ಬೆಂಗಳೂರು: ಅಪಾರ್ಟ್​ಮೆಂಟ್​ ಒಳಗೆ ಅನುಮಾನಾಸ್ಪದವಾಗಿ ಹೋಗುತ್ತಿದ್ದ ವ್ಯಕ್ತಿ ಕಳ್ಳನೆಂದು ಭಾವಿಸಿ ಸೆಕ್ಯುರಿಟಿ ಗಾರ್ಡ್​ ತಲೆಗೆ ಬಲವಾಗಿ ಹೊಡೆದ ಕಾರಣಕ್ಕೆ ಬ್ಯಾಂಕ್​ ಉದ್ಯೋಗಿಯೊಬ್ಬ ಕೊಲೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಇದೇ 5ರಂದು ಮಾರತ್ತಹಳ್ಳಿ ಸಮೀಪದ ವನ್ಶಿ ಸಿಟಾಡೆಲ್ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ಮಧ್ಯರಾತ್ರಿ ಸುಮಾರು ಎರಡು ಗಂಟೆ ವೇಳೆ ಬ್ಯಾಂಕ್​ ಉದ್ಯೋಗಿ ಅಭಿಷೇಕ್​, ಪಾರ್ಟಿ ಮಾಡಿ ಬಂದು ಕಾಂಪೌಂಡ್ ಹಾರಿ ಬಂದಿದ್ದರು. ಅಪರಿಚಿತ ವ್ಯಕ್ತಿ ಅಪಾರ್ಟ್‌ಮೆಂಟ್ ಒಳಗೆ ಬರುತ್ತಿರುವುದನ್ನು ಗಮನಿಸಿದ ಸೆಕ್ಯುರಿಟಿ ಶ್ಯಾಮನಾಥ್ ನೀವು ಯಾರು ಎಂದು ಪ್ರಶ್ನಿಸಿದ್ದಾರೆ.

ಸೆಕ್ಯುರಿಟಿ ಎಷ್ಟೇ ಕೇಳಿದರೂ ಪಾರ್ಟಿ ಮಾಡಿದ ಭಯದಿಂದಲೋ ಏನೋ ಅಭಿಷೇಕ್​ ಬಾಯಿ ಬಿಟ್ಟಿಲ್ಲ. ಅದರ ಬದಲು ಒಳಗೆ ರಭಸದಿಂದ ಹೋಗತೊಡಗಿದ್ದಾರೆ. ಇದನ್ನು ಗಮನಿಸಿದ ಸೆಕ್ಯುರಿಟಿ ಆತ ಕಳ್ಳನೆಂದು ಭಾವಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಅಲ್ಲಿಯೇ ಜಿಮ್‌ನಲ್ಲಿದ್ದ ರಾಡ್‌ನಿಂದ ಅಭಿಷೇಕ್ ತಲೆಗೆ ಹೊಡೆದುಬಿಟ್ಟಿದ್ದಾರೆ.

ಅಭಿಷೇಕ್ ತಲೆಗೆ ಗಂಭೀರ ಪೆಟ್ಟು ಬಿದ್ದು ಮೃತಪಟ್ಟಿದ್ದಾರೆ. ಕಳ್ಳತನ ಮಾಡಿದರೆ ತನ್ನ ಕೆಲಸ ಹೋಗುತ್ತದೆ ಎಂದು ಸೆಕ್ಯುರಿಟಿ ಗಾರ್ಡ್ ಹೀಗೆ ಮಾಡಿದ್ದಾರೆ. ಆದರೆ ಆಮೇಲೆ ಪೊಲೀಸರ ತನಿಖೆಯಿಂದ ಸತ್ಯ ಬಯಲಾಗಿದೆ. ಛತ್ತೀಸ್‌ಗಢ ಮೂಲದ ಬ್ಯಾಂಕ್ ಉದ್ಯೋಗಿ ಅಭಿಷೇಕ್ ತರಬೇತಿ ಸಲುವಾಗಿ ಬೆಂಗಳೂರಿಗೆ ಬಂದಿದ್ದು, ಮಧ್ಯರಾತ್ರಿ ಪಾರ್ಟಿ ಮುಗಿಸಿ ಅಪಾರ್ಟ್​ಮೆಂಟ್​ ಒಳಗೆ ಬರುತ್ತಿರುವ ವಿಷಯ ತಿಳಿದಿದೆ. ಸದ್ಯ ಸೆಕ್ಯುರಿಟಿಯನ್ನು ಅರೆಸ್ಟ್​ ಮಾಡಲಾಗಿದೆ.