ಜಿಲ್ಲೆ

ಹಿಂದೂ ಹೆಸರಿಟ್ಟುಕೊಂಡು ಭಾರತದ ಪೌರತ್ವ! ಬೆಂಗಳೂರಿನಲ್ಲಿ ತಣ್ಣಗೆ ನೆಲೆಸಿದ್ದ ಬಾಂಗ್ಲಾ ಯುವತಿ ಅರೆಸ್ಟ್‌

ಬೆಂಗಳೂರು: ಭಾರತದ ವಿವಿಧ ಭಾಗಗಳಲ್ಲಿ ಬಾಂಗ್ಲಾ ಅಕ್ರಮ ವಲಸಿಗರ ಸಂಖ್ಯೆ ವಿಪರೀತ ಎನ್ನುವಷ್ಟರ ಮಟ್ಟಿಗೆ ಆಗಿದೆ. ಅದರಲ್ಲಿಯೂ ಬೆಂಗಳೂರಿನಂಥ ಮಹಾನಗರಗಳಲ್ಲಿ ಇವರ ಸಂಖ್ಯೆ ಹೆಚ್ಚಾಗಿದ್ದು, ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಸರ್ಕಾರಗಳು ಇನ್ನಿಲ್ಲದ ಕ್ರಮಕ್ಕೆ ಮುಂದಾಗಿವೆ. ವಿವಿಧೆಡೆಗಳಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡಿದ್ದ ಕೆಲವು ಸರ್ಕಾರಗಳು ಇದರ ಬೆನ್ನತ್ತಿ ಹೋದಾಗ ಬಾಂಗ್ಲಾ ಸೇರಿದಂತೆ ಕೆಲವು ರಾಜ್ಯಗಳಿಂದ ಬಂದಿರುವ ಅಕ್ರಮ ವಲಸಿಗರ ಪತ್ತೆ ಮಾಡಿದ್ದವು. ಇದೀಗ ಇವರ ಹುಡುಕಾಟದಲ್ಲಿ ಪೊಲೀಸ್‌ ಇಲಾಖೆಗಳು ಚುರುಕಾಗಿವೆ.

ಅದೇ ರೀತಿ, ಬೆಂಗಳೂರಿನ ಪೊಲೀಸರು ತನಿಖೆ ಕೈಗೊಂಡಾಗ ಮುಸ್ಲಿಂ ಯುವತಿಯೊಬ್ಬಳು ಹಿಂದೂ ಹೆಸರಿಟ್ಟುಕೊಂಡು ಇಲ್ಲಿನ‌ ಪೌರತ್ವ ಪಡೆದುಕೊಂಡಿರುವುದು ಕಂಡುಬಂದಿದೆ. 15 ವರ್ಷಗಳ ಹಿಂದೆಯೇ ಭಾರತಕ್ಕೆ ಬಂದು ಇಲ್ಲಿಯ ಪೌರತ್ವ ಪಡೆದುಕೊಂಡಿದ್ದ ರೋನಿ ಬೇಗಂ ಬೆಂಗಳೂರಿನ ಬ್ಯಾಡರಹಳ್ಳಿಯ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಈಕೆ ಬೆಂಗಳೂರಿಗೂ ಬರುವ ಮುನ್ನ ಮುಂಬೈನಲ್ಲಿ ವಾಸವಾಗಿದ್ದಳು. ಬಾಂಗ್ಲಾದಿಂದ 2006-07ರ ಸುಮಾರಿಗೆ ಈಕೆ ಬಾಂಗ್ಲಾದಿಂದ ಇಲ್ಲಿಗೆ ಬಂದಿದ್ದಳು. ಮುಂಬೈನ ಡಾನ್ಸ್‌ ಬಾರ್‌ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದಳು. ಇಲ್ಲಿ ಈಕೆಗೆ ಮಂಗಳೂರಿನ ಯುವಕ ನಿತಿನ್‌ ಎಂಬುವವನ ಸ್ನೇಹ ಬೆಳೆದಿದೆ. ಇಬ್ಬರೂ 2015ರಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

ನಂತರ ಆತನನ್ನು ಹಿಂದೂ ಸಂಪ್ರದಾಯದಂತೆ ಮದುವೆಯಾಗಿ ತನ್ನ ಹೆಸರನ್ನು ಪಾಯಲ್ ಘೋಷ್ ಎಂದು ಬದಲಾಯಿಸಿಕೊಂಡು ನಕಲಿ ದಾಖಲೆಯೊಂದಿಗೆ ಇಲ್ಲಿಯ ಪೌರತ್ವ ಪಡೆದುಕೊಂಡಿದ್ದಾಳೆ. ಇದೀಗ ಮತ್ತೆ ಬಾಂಗ್ಲಾಗೆ ಪ್ರಯಾಣ ಬೆಳೆಸಲು ಮುಂದಾದಾಗ ಏರ್‌ಪೋರ್ಟ್‌ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಇಮಿಗ್ರೇಷನ್ ಅಧಿಕಾರಿಗಳ ಮುಂದೆ ಈಕೆ ಗೊಂದಲದ ಹೇಳಿಕೆ ನೀಡಿದ್ದರಿಂದ ಅಧಿಕಾರಿಗಳು ಆಕೆಯನ್ನು ಏರ್​ಪೋರ್ಟ್​ನಿಂದ ವಾಪಸ್ ಕಳುಹಿಸಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಅಸಲಿಯತ್ತ ತಿಳಿದುಬಂದಿದೆ. ಈಕೆಯನ್ನು ಬಂಧಿಸಲಾಗಿದ್ದು, ಅಕ್ರಮವಾಗಿ ದಾಖಲಾತಿ ಮಾಡಿಕೊಟ್ಟವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.