ಜಿಲ್ಲೆ

ಕಚೇರಿಯಲ್ಲಿ ಎಲ್ರೂ ಮಾಡೋದು ಅದೇ ಕೆಲ್ಸ, ಭೇದಭಾವ ಸಹಿಸಲು ಆಗ್ತಿಲ್ಲ... ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ!

ಅಥಣಿ (ಬೆಳಗಾವಿ): ಕಳೆದ ಸೋಮವಾರ ಬೆಳಗಾವಿಯ ಅಥಣಿ ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿನ ಸಿಬ್ಬಂದಿ ಮಂಜುನಾಥ್ ಮುತ್ತಗಿ ಆತ್ಮಹತ್ಯೆಗೆ ಶರಣಾಗಿದ್ದರು. ಆದರೆ ಅವರ ಸಾವಿಗೆ ನಿಖರ ಕಾರಣ ಏನು ಎಂದು ತಿಳಿದಿರಲಿಲ್ಲ.

ಇದೀಗ ಇವರು ಬರೆದಿಟ್ಟ ಡೆತ್​ನೋಟ್​ ಪತ್ತೆಯಾಗಿದ್ದು, ಆತ್ಮಹತ್ಯೆಗೆ ಕಾರಣ ಬಹಿರಂಗಗೊಂಡಿದೆ. 'ಮೇಲಧಿಕಾರಿ ಹಾಗೂ ಲೈನ್​ಮ್ಯಾನ್​ನಿಂದ ಆಗುತ್ತಿರುವ ಕಿರುಕುಳ ಹಾಗೂ ಭೇದಭಾವ ನನಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ' ಎಂದು ಮಂಜುನಾಥ್​ ಡೆತ್​ನೋಟ್​ನಲ್ಲಿ ಬರೆದಿದ್ದಾರೆ.

'ನನಗೆ ಈ ಕೆಲಸ ಅಂದ್ರೆ ತುಂಬಾ ತುಂಬಾ ಇಷ್ಟ. ಆದರೆ ಇವರು ಮಾಡುವ ಭೇದಭಾವ, ನಮಗೊಂದು ಅವರಿಗೊಂದು ಅಂತ ನಡೆದುಕೊಳ್ತಿರೋ ರೀತಿ ನೋಡಲು ಆಗುತ್ತಿಲ್ಲ. ನಮ್ಮನ್ನೆಲ್ಲ ವಾರದ ಏಳು ದಿನ, 24 ಗಂಟೆಯೂ ಕೇವಲವಾಗಿ ನೋಡುತ್ತಾರೆ. ಆದರೆ ನಾವು ಮಾಡೋದು ಸಹ ಹೆಸ್ಕಾಂ ಕೆಲಸ. ಆದ್ರೆ ಇವರು ನಮ್ಮನ್ನು ನೋಡುವ ರೀತಿ ಸರಿ ಇಲ್ಲ. ಇದು ಬದಲಾಗಬೇಕು' ಎಂದು ಡೆತ್​ನೋಟ್​ನಲ್ಲಿ ಬರೆಯಲಾಗಿದೆ.

'ನನ್ನ ಸಾವಿಗೆ ಇವರು ಇಬ್ಬರೇ ಕಾರಣ. ಬಸು ಕುಂಬಾರ್, ನಜೀರ್ ಡಲಾಯತ್, ಯಾಕೆಂದ್ರೆ ಇವರು ಮಾಡುವ ಮೋಸ, ಅನ್ಯಾಯ, ಮಾನಸಿಕ ಹಿಂಸೆ ದಬ್ಬಾಳಿಕೆ, ಕಿರುಕುಳ ಇದನ್ನೆಲ್ಲ ಸಹಿಸಿಕೊಳ್ಳೋಕೆ ಆಗದೇ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. I LOVE HESCOM' ಎಂದು ಬರೆದಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡಿರುವ ಮಂಜುನಾಥ ಮುತ್ತಗಿ ಪತ್ನಿ ಲಕ್ಷ್ಮೀ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿಕೊಂಡಿದ್ದಾರೆ. ಭೇದಭಾವ, ಮಾನಸಿಕ ಹಿಂಸೆ ಮತ್ತು ಕಿರುಕುಳದಿಂದಾಗಿ ಪತಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಲಕ್ಷ್ಮೀ ಉಲ್ಲೇಖಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಅಥಣಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)