ಬೆಂಗಳೂರು: ಕರೊನಾದಿಂದಾಗಿ ಹಲವು ಕಾರ್ಮಿಕರ ಬದುಕು ಬೀದಿಗೆ ಬಂದಿದೆ. ಎಷ್ಟೋ ಮಂದಿಗೆ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಉಂಟಾಗಿದೆ. ಇದೇ ಕಾರಣದಿಂದ ಸರ್ಕಾರದ ವತಿಯಿಂದ ರಾಜ್ಯದ ಹಲವು ಕಡೆಗಳಲ್ಲಿ ಇದಾಗಲೇ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿದೆ.
ಇದರ ಬೆನ್ನಲ್ಲೇ ಇದೀಗ ಅಪ್ಪಾಜಿ ಕ್ಯಾಂಟೀನ್ ಬೆಂಗಳೂರಿಗರಿಗೆ ಸೇವೆ ಒದಗಿಸಲು ಸನ್ನದ್ಧವಾಗಿದೆ. ಸಂಚಾರಿ ಅಪ್ಪಾಜಿ ಮೊಬೈಲ್ ಕ್ಯಾಂಟೀನ್ ಸೇವೆ ಸೋಮವಾರ (ಮೇ 17) ಆರಂಭವಾಗಲಿದೆ.
ಕರೊನಾ ಸಂಕಷ್ಟದಲ್ಲಿ ಅನೇಕರು ಹಸಿವಿನಿಂದ ತತ್ತರಿಸುತ್ತಿರುವುದನ್ನು ತಪ್ಪಿಸುವ ಉದ್ದೇಶದಿಂದ ಜೆಡಿಎಸ್ ಮಾಜಿ ವಿಧಾನಪರಿಷತ್ ಸದಸ್ಯರಾದ ಡಾ. ಟಿ.ಎ. ಶರವಣ ಹಾಗೂ ಜೆಡಿಎಸ್ ನ ಪ್ರಮುಖ ಮುಖಂಡರುಗಳು ಸೋಮವಾರದಿಂದ ನಮ್ಮ ದೇವೇಗೌಡ ಸಂಚಾರಿ ಅಪ್ಪಾಜಿ ಕ್ಯಾಂಟಿನನ್ನು ಪ್ರಾರಂಭಿಸಲಿದ್ದಾರೆ ಎಂದು ಜೆಡಿಎಸ್ ಮುಖಂಡರು ಹೇಳಿದ್ದಾರೆ.
ಈ ಕ್ಯಾಂಟೀನ್‌ನಲ್ಲಿ ಉಚಿತವಾಗಿ ಊಟದ ಪ್ಯಾಕೆಟ್‌ಗಳನ್ನು ವಿತರಿಸಲಾಗುತ್ತದೆ. ವಿಕ್ಟೋರಿಯಾ ಆಸ್ಪತ್ರೆಯ ಮುಂಭಾಗದ ಗೇಟ್, ಕೆ ಆರ್ ಮಾರ್ಕೆಟ್ ಮೆಟ್ರೋ ಸ್ಟೇಷನ್ ಹತ್ತಿರ ಈ ಸೇವೆ ಆರಂಭವಾಗಲಿದೆ. ಮಧ್ಯಾಹ್ನ 12 ಗಂಟೆಗೆ ಇದರ ಉದ್ಘಾಟನೆ ನಡೆಯಲಿದೆ. ಮಾಹಿತಿಗಾಗಿ ಸಂಪರ್ಕಿಸಿ: ಡಾ.ಟಿ.ಎ. ಶರವಣ- 9844006560.