ಜಿಲ್ಲೆ

ಖಾತೆ ಕ್ಯಾತೆ ಸುಖಾಂತ್ಯ: ನಾನು ರಿಸೈನ್‌ ಮಾಡುತ್ತೇನೆಂದು ಎಲ್ಲಿ ಹೇಳಿದ್ದೇನೆ ಎಂದು ಪ್ರಶ್ನಿಸಿದ ಆನಂದ್‌ ಸಿಂಗ್‌!

ಬೆಂಗಳೂರು: ತಮ್ಮ ಖಾತೆ ಬದಲಾವಣೆ ಮಾಡುವಂತೆ ಕಳೆದ ಕೆಲವು ದಿನಗಳಿಂದ ಸಚಿವ ಆನಂದ್‌ ಸಿಂಗ್‌ ಮತ್ತು ರಾಜಕೀಯ ಧುರೀಣರ ನಡುವೆ ನಡೆಯುತ್ತಿರುವ ಜಟಾಪಟಿ ಸದ್ಯ ಸುಖಾಂತ್ಯ ಕಂಡಿದೆ. ಖಾತೆ ಬದಲಾವಣೆ ಕುರಿತಂತೆ ಪಕ್ಷದ ವರಿಷ್ಠರ ವಿರುದ್ಧ ಹಲವಾರು ಆರೋಪ ಮಾಡುತ್ತಿದ್ದ ಆನಂದ್‌ ಸಿಂಗ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಬಂದ ಬಳಿಕ ತಣ್ಣಗಾಗಿದ್ದಾರೆ.

ಸಿಎಂ ಜತೆ ಕೆಲವು ನಿಮಿಷಗಳ ಚರ್ಚೆ ನಡೆಸಿದ ಆನಂದ್‌ ಸಿಂಗ್‌ ಅವರು ಹೊರಬರುತ್ತಿದ್ದಂತೆಯೇ ಉಲ್ಟಾ ಹೊಡೆದಿದ್ದು, ನಾನು ರಾಜೀನಾಮೆ ನೀಡುತ್ತೇನೆ ಎಂದು ಎಲ್ಲಿ ಹೇಳಿದ್ದೇನೆ? ಆ ರೀತಿ ನಾನು ಹೇಳಿಯೇ ಇಲ್ಲ ಎಂದಿದ್ದಾರೆ. ಜತೆಗೆ ಮುಖ್ಯಮಂತ್ರಿ ಜತೆಗಿನ ಚರ್ಚೆಯ ಕುರಿತು ವಿವರಿಸಿದ ಅವರು, ನಾನು ರಾಜೀನಾಮೆ ಕೊಡುತ್ತೇನೆ ಎಂದು ಎಲ್ಲಿಯೂ ಹೇಳಲಿಲ್ಲ, ಕೊಡುವುದೂ ಇಲ್ಲ ಎಂದಿದ್ದಾರೆ.

ಇಂಥದ್ದೊಂದು ಮಹತ್ವದ ತಿರುವು ಪಡೆದುಕೊಳ್ಳಲು ಕಾರಣ, ಮುಖ್ಯಮಂತ್ರಿಗಳು ಆನಂದ್‌ ಸಿಂಗ್‌ ಅವರಿಗೆ ನೀಡಿರುವ ಕೆಲವು ಭರವಸೆಗಳು ಎನ್ನಲಾಗಿದೆ. ಖಾತೆ ಬದಲಾವಣೆ ಕುರಿತಂತೆ ತಾವು ಹೈಕಮಾಂಡ್‌ ಜತೆಗೆ ಮಾತುಕತೆ ನಡೆಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿರುವುದಾಗಿ ತಿಳಿದಿದೆ. ಮಾತ್ರವಲ್ಲದೇ, ಖುದ್ದಾಗಿ ದೆಹಲಿಗೆ ತೆರಳಲು ಆನಂದ್‌ ಸಿಂಗ್‌ ಅವರಿಗೆ ಮುಖ್ಯಮಂತ್ರಿಗಳು ಸೂಚನೆ ಕೊಟ್ಟಿದ್ದಾರೆ.

ದೆಹಲಿಗೆ ತೆರಳಿ ಅಲ್ಲಿ ವರಿಷ್ಠರನ್ನು ಭೇಟಿಯಾಗಿ ನಿಮ್ಮ ವಿಚಾರವನ್ನು ಹೇಳಿಕೊಳ್ಳಿ, ಅಲ್ಲಿ ರಾಷ್ಟ್ರೀಯ ನಾಯಕರು ಇದ್ದು, ಅವರ ಬಳಿ ಚರ್ಚಿಸಿ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದ್ದು, ಆನಂದ್‌ ಸಿಂಗ್‌ ಅವರಿಗೆ ಇದು ತೃಪ್ತಿ ತಂದಿದೆ ಎನ್ನಲಾಗಿದೆ. ಮುಂದಿನ ವಾರವೇ ದೆಹಲಿಗೆ ತೆರಳಲು ಆನಂದ್‌ ಸಿಂಗ್‌ ಚಿಂತನೆ ನಡೆಸಿದ್ದಾರೆ.

ತಮ್ಮ ಜತೆ ಚರ್ಚಿಸಿರುವ ವಿಷಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದ್ದು, ಆನಂದ್‌ ಸಿಂಗ್‌ ರಾಜೀನಾಮೆ ನೀಡುವುದಿಲ್ಲ. ಇದೇ ಆಗಸ್ಟ್‌ 15ರಂದು ಧ್ವಜಾರೋಹಣ ಮಾಡಲು ನಾನು ಅವರಿಗೆ ಹೇಳಿದ್ದೇನೆ. ಅವರೇ ಧ್ವಜಾರೋಹಣ ಮಾಡಲಿದ್ದಾರೆ ಎಂದಿದ್ದಾರೆ. ಒಟ್ಟಿನಲ್ಲಿ ಖಾತೆ ಕ್ಯಾತೆ ವಿಚಾರ ಸದ್ಯದ ಮಟ್ಟಿಗೆ ಶಮನವಾಗಿದೆ.