ಮೇರಿಲ್ಯಾಂಡ್ (ಅಮೆರಿಕ): ಕನ್ನಡ ಸರಳ ಮತ್ತು ಸುಂದರವಾದ ಭಾಷೆ ಎಂದು ಶ್ರೀ ಸುತ್ತೂರು ಮಠದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹೇಳಿದರು.
ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ನಡೆದ ಕಾವೇರಿ ಕನ್ನಡ ಸಂಘದ ಸುವರ್ಣ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಅಮೆರಿಕದಲ್ಲಿ ಕನ್ನಡ ಸಂಘ ಸ್ಥಾಪನೆಯಾಗಿ 50 ವರ್ಷಗಳನ್ನು ಪೂರೈಸಿರುವುದು ಸುವಾರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದು. ಕನ್ನಡ ಎಂಬುದು ಭಾಷೆಯಷ್ಟೇ ಅಲ್ಲ. ಅದು ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ, ಸಾಹಿತ್ಯಕವಾಗಿಯೂ ಅಪೂರ್ವವಾದ ಶ್ರೀಮಂತಿಕೆಯನ್ನು ಹೊಂದಿದೆ. ಕಾವೇರಿ ನದಿ ತಲಕಾವೇರಿಯಲ್ಲಿ ಸಣ್ಣ ತೊರೆಯಾಗಿ ಉಗಮಿಸಿ ನಂತರ ದೊಡ್ಡ ನದಿಯಾಗಿ ಹರಿದಂತೆ, ಅಮೆರಿಕದಲ್ಲಿ ಚಿಕ್ಕದಾಗಿ ಆರಂಭವಾದ ಈ ಸಂಘ ಇಂದು ಬೃಹತ್ತಾಗಿ ಬೆಳೆಯುವಲ್ಲಿ ಅನೇಕ ಮಹನೀಯರುಗಳ ಕೊಡುಗೆಯಿದೆ. ಕಾವೇರಿ ಕನ್ನಡ ಸಂಘ ಹೀಗೆಯೇ ಯಶಸ್ಸು ಸಾಧಿಸುತ್ತಾ ಶತಮಾನೋತ್ಸವವನ್ನು ಆಚರಿಸುವಂತಾಗಲಿ ಎಂದು ಹಾರೈಸಿದರು.
ಅಮೆರಿಕದ ಮಾಂಟೊಗೊಮರಿಯ ಕೌಂಟಿಯ ಕಾರ್ಯನಿರ್ವಾಹಕರಾದ ಮಾರ್ಕ್‌ಎನ್‌ರಿಚ್ ಮಾತನಾಡಿ, ಭಾರತದಲ್ಲಿ ಸಂಸ್ಕೃತದ ನಂತರ ಹೆಚ್ಚು ಬಳಕೆಯಿರುವ ಭಾಷೆಗಳಲ್ಲಿ ಕನ್ನಡವೂ ಒಂದಾಗಿದೆ. ಅಮೆರಿಕದಲ್ಲಿ ಎಲ್ಲ ಕಾರ್ಯಗಳಲ್ಲೂ ಭಾರತೀಯ ಸಮುದಾಯದವರು ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತಾರೆ. ಕಾವೇರಿ ಕನ್ನಡ ಸಂಘ 50ವರ್ಷಗಳನ್ನು ಪೂರೈಸಿರುವುದು ಸ್ಮರಣೀಯವಾದ ದಿನ ಎಂದರು.
ಭಾರತದ ರಾಯಭಾರ ಕಚೇರಿಯ ಶೈಕ್ಷಣಿಕ ಮತ್ತು ಸಮುದಾಯ ವಿಭಾಗದ ಕೌನ್ಸಿಲರ್ ಅನ್ಸುಲ್‌ಶರ್ಮಾರವರು ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಅಮೆರಿಕದ ಕಾವೇರಿ ಕನ್ನಡ ಸಂಘ 50 ವರ್ಷಗಳನ್ನು ಪೂರೈಸಿರುವುದು ಸಂಭ್ರಮದ ಸಂಗತಿ. ಕಾವೇರಿ ಕನ್ನಡ ಸಂಘ ಸಾಂಸ್ಕೃತಿಕ ಮತ್ತು ಸಾಹಿತ್ಯಕವಾಗಿ ಭಾರತ ಮತ್ತು ಅಮೆರಿಕದ ಬಾಂಧವ್ಯವನ್ನು ವೃದ್ಧಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ ಎಂದು ತಿಳಿಸಿದರು.
ರಾಬರ್ಟ್ ಎಚ್ ಬ್ಯುಸಿನೆಸ್‌ಸ್ಕೂಲ್‌ನ ಡೀನ್‌ರವರಾದ ಪ್ರಭುದೇವ ಕೊನಾನರವರು ಮಾತನಾಡಿ, ಅಮೆರಿಕದಲ್ಲಿ ಭಾರತೀಯ ಕಲೆ, ಸಂಸ್ಕೃತಿ, ಸಾಹಿತ್ಯ, ಆಹಾರ, ಉಡುಗೆ-ತೊಡುಗೆಗಳನ್ನು ಪರಿಚಯಿಸಿ ಬೆಳೆಸುವಲ್ಲಿ ಕಾವೇರಿ ಪ್ರಮುಖವಾದ ಪಾತ್ರವನ್ನು ವಹಿಸುತ್ತಿದೆ. ಮುಂದಿನ ಪೀಳಿಗೆಗೂ ಇದನ್ನು ಉಳಿಸಿಕೊಂಡು ಹೋಗುವ ಕಾರ್ಯವನ್ನು ಮಾಡುತ್ತಿದೆ. ಕನ್ನಡ ಮತ್ತು ಕನ್ನಡ ಸಂಸ್ಕೃತಿ ಈ ದೇಶದಲ್ಲಿ ಒಂದು ಘನತೆಯನ್ನು ಹೊಂದಿದೆ. ಇಲ್ಲಿನ ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿಯೂ ಕನ್ನಡವನ್ನು ಬೋಧಿಸುವ ಕಾರ್ಯ ಆರಂಭವಾಗಬೇಕು ಆ ನಿಟ್ಟಿನಲ್ಲಿ ನಾವೆಲ್ಲ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಕಾವೇರಿ ಕನ್ನಡ ಸಂಘದ ಸಂಸ್ಥಾಪಕ ಸದಸ್ಯರಾದ ಭಾರತಿ ಶೆಟ್ಟಿ, ರಾಜಶೇಖರ್ ದೊಡ್ಡಣ್ಣ, ಕಾವೇರಿ ಕೃಷ್ಣಮೂರ್ತಿ, ಅಧ್ಯಕ್ಷಾರದ ಸತೀಶ್ ಬೆಳಗುತ್ತಿ ಮತ್ತು ಸಂಘದ ವಿವಿಧ ಸಮಿತಿಗಳ ಸದಸ್ಯರುಗಳು ಉಪಸ್ಥಿತರಿದ್ದರು. ಅಮೆರಿಕದ ಕನ್ನಡಿಗರು ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದ್ದರು ಉಷಾ ಝಾ ತಂಡದವರು ರಾಷ್ಟ್ರಗೀತೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.