ವಿಜಯವಾಣಿ ಸುದ್ದಿಜಾಲ ಬೈಲಹೊಂಗಲ
ರಾಯಣ್ಣನ ಇತಿಹಾಸವನ್ನು ವಿಶ್ವಕ್ಕೆ ತಿಳಿಸುವ ಕಾರ್ಯಕ್ರಮ ಸರ್ಕಾರ ಮಾಡುತ್ತಿದ್ದು, ಜ.12 ಮತ್ತು 13ರಂದು ಅದ್ಧೂರಿಯಾಗಿ ಸಂಗೊಳ್ಳಿ ರಾಯಣ್ಣನ ಉತ್ಸವ ಆಚರಿಸಲಾಗುವುದು ಎಂದು ಶಾಸಕ, ರಾಜ್ಯ ಹಣಕಾಸು ಸಂಸ್ಥ ಅಧ್ಯಕ್ಷ ಮಹಾಂತೇಶ ಕೌಜಲಗಿ ಹೇಳಿದರು.
ತಾಲೂಕಿನ ಸಂಗೊಳ್ಳಿ ಗ್ರಾಮದ ಸ್ಮಾರಕ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ-2025ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ಬಾರಿಯು ಜನೇವರಿ 12 ಹಾಗೂ 13 ರಂದು ಅದ್ಧೂರಿಯಾಗಿ ಸಂಗೊಳ್ಳಿ ರಾಯಣ್ಣನ ಉತ್ಸವವನ್ನು ಆಚರಿಸಲಾಗುವುದು ಎಂದರು.
ಎರಡು ದಿನಗಳ ಕಾಲ ಜರುಗಲಿರುವ ಉತ್ಸವದ ಉದ್ಘಾಟನಾ ಕಾರ್ಯಕ್ರಮ ಸೇರಿದಂತೆ ಎಲ್ಲ ಕಾರ್ಯಕ್ರಮಗಳಲ್ಲಿ ಗ್ರಾಮಸ್ಥರು ಭಾಗಿಯಾಗುವುದರ ಮೂಲಕ ಉತ್ಸವವನ್ನು ಯಶಸ್ವಿಗೊಳಿಸಬೇಕು.ಉತ್ಸವದ ಮೆರವಣಿಗೆಯಲ್ಲಿ ಉತ್ತಮ ಜಾನಪದ ಕಲಾತಂಡಗಳನ್ನು ಆಯ್ಕೆ ಮಾಡಲಾಗುವದು. ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಿ ಉತ್ತಮ ಕುಸ್ತಿ ಪಟುಗಳನ್ನು ಆಹ್ವಾನಿಸಲಾಗುವದು. ವಿಚಾರ ಸಂಕೀರಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿದರು.
ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಮಾತನಾಡಿ, ಎರಡು ದಿನಗಳ ಕಾಲ ಜರುಗಲಿರುವ ರಾಯಣ್ಣನ ಉತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲಾಗುವದು. ಮುಂದಿನ ಪೀಳಿಗೆಗೆ ಇತಿಹಾಸವನ್ನು ತಿಳಿಸುವ ಕುರಿತು ಉತ್ಸವಗಳನ್ನು ಆಯೊಜಿಸಲಾಗುತ್ತಿದೆ. ಸಂಗೋಳ್ಳಿ ರಾಯಣ್ಣನ ಉತ್ಸವದ ಯಶಸ್ವಿಗಾಗಿ 13 ಉಪ ಸಮಿತಿಗಳನ್ನು ರಚಿಸಲಾಗುವುದು. ಈ ಸಮಿತಿಗಳಲ್ಲಿ ಅಧಿಕಾರಿಗಳ ಜತೆ ಗ್ರಾಮಸ್ಥರನ್ನು ಸದಸ್ಯರನ್ನಾಗಿ ನೇಮಿಸಲಾಗುವದು. ಈ ಸಮಿತಿಗಳ ಸಭೆಯಲ್ಲಿ ಸಂಗೋಳ್ಳಿ ಹಾಗೂ ರಾಯಣ್ಣನ ಇತಿಹಾಸವನ್ನು ಪರಿಣಾಮಕಾರಿಯಾಗಿ ಪಸರಿಸುವಂತಹ ಸಲಹೆ ನೀಡುವಂತೆ ವಿನಂತಿಸಿದರು.
ಕಿತ್ತೂರ ಶಾಸಕ ಬಾಬಸಾಹೇಬ ಪಾಟೀಲ,ಗ್ರಾಪಂ ಅಧ್ಯಕ್ಷೆ ರೂಪಾ ಚಚಡಿ,ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ಜಿಪಂ ಉಪಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ಬೈಲಹೊಂಗಲ ಡಿ.ವೈ.ಎಸ್.ಪಿ ರವಿ ನಾಯಕ, ಲೊಕೊಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಸೊಬರದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೆಶಕಿ ವಿದ್ಯಾವತಿ ಭಜಂತ್ರಿ ಇತರರಿದ್ದರು.