ಜಿಲ್ಲೆ

ಕಲಿಕೆ ಜತೆಗೆ ಕೌಶಲ್ಯ ಯೋಜನೆಗೆ ಆರ್‌ವಿವಿ ಆಯ್ಕೆ

ರಾಚಯ್ಯ ಸ್ವಾಮಿ

ರಾಯಚೂರು: ರಾಜ್ಯ ಸರ್ಕಾರದ ಕಲಿಕೆ ಜತೆಗೆ ಕೌಶಲ್ಯ ಯೋಜನೆಗೆ ಆಯ್ಕೆಯಾಗಿರುವ ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ರಾಯಚೂರು ವಿಶ್ವವಿದ್ಯಾಲಯವು ಒಂದಾಗಿದ್ದು, ಇದರಿಂದ ಜಿಲ್ಲೆಯ ಶೈಕ್ಷಣಿಕ ಅಭವೃದ್ಧಿಗೆ ಸಹಕಾರಿಯಾಗಲಿದೆ ಎಂದು ವಿವಿ ಕುಲಸಚಿವ ಪ್ರೊ.ಎಂ.ವಿಶ್ವನಾಥ ಹೇಳಿದರು.
ಸ್ಥಳೀಯ ವಿವಿಯ ಕೃಷ್ಣತುಂಗಾ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಲಿಕೆ ಜತೆಗೆ ಕೌಶಲ್ಯ ಯೋಜನೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ವಿವಿ ವ್ಯಾಪ್ತಿಗೆ ಬರುವ ಕಾಲೇಜುಗಳು ಯೋಜನೆಯ ಲಾಭ ಪಡೆದು ವಿದ್ಯಾರ್ಥಿಗಳಲ್ಲಿ ಔದ್ಯೋಗಿಕ ಕೌಶಲ್ಯ ಹೆಚ್ಚಿಸಬೇಕು ಎಂದರು.
ಮೂರು ವರ್ಷಗಳಿಂದ ವಿವಿ ಅನೇಕ ಸವಾಲುಗಳ ನಡುವೆ ಮುಂದುವರೆಯಲು ಕಾಲೇಜುಗಳ ಪ್ರಾಚಾರ್ಯರು, ಸಿಬ್ಬಂದಿಗಳು ಕೈಜೋಡಿಸಿರುವುದರಿಂದ ಸಾಧ್ಯವಾಗಿದೆ. ವಿವಿ ಸ್ಥಾಪನೆಯ ಹಿಂದೆ ಅನೇಕರ ತ್ಯಾಗ, ಪರಿಶ್ರಮ, ಸಹಕಾರವಿದೆ ಎಂದು ಹೇಳಿದರು.
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ವ್ಯವಸ್ಥಾಪಕ ಎಂ.ಜಿತೇಂದ್ರ ಮಾತನಾಡಿ, ಕಳೆದ ಬಜೆಟ್‌ನಲ್ಲಿ ಕಲಿಕೆ ಜತೆಗೆ ಕೌಶಲ್ಯ ಯೋಜನೆಯಡಿ ಅಂತಿಮ ವರ್ಷದ ಪದವಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕಲಿಕೆ ಜತೆಗೆ ಔದ್ಯೋಗಿಕ ಕೌಶಲ್ಯ ನೀಡಲಾಗುವುದು ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ.ಶಿವಶರಣ ಗೊಳ್ಳೆ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಅಥವಾ ಕೌಶಲ್ಯಾಧರಿತ ಶಿಕ್ಷಣ ಪಡೆಯಲು ಲಕ್ಷಾಂತರ ರೂ. ಖರ್ಚು ಮಾಡಬೇಕಾಗುತ್ತಿದೆ. ಆದರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕನಿಷ್ಠ ಶುಲ್ಕ ನೀಡಿ ಪದವಿ ಮುಗಿಸಬಹುದಾಗಿದೆ.
ಸರ್ಕಾರ ವಿದ್ಯಾರ್ಥಿಗಳಲ್ಲಿ ಔದ್ಯೋಗಿಕ ಗುಣಮಟ್ಟ ಹೆಚ್ಚಿಸುವ ದೃಷ್ಟಿಯಿಂದ ಸರ್ಕಾರ ಪರಿಚಯಿಸುವ ಕೆಲವು ಕಾರ್ಯಕ್ರಮಗಳು ಬಹು ಉಪಯುಕ್ತವಾಗಿರುತ್ತವೆ. ವಿದ್ಯಾರ್ಥಿಗಳು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜು ಶಿಕ್ಷಣ ಇಲಾಖೆ ನೋಡಲ್ ಅಕಾರಿಗಳಾದ ಡಾ.ಆರ್.ನಾಗೇಶ, ಪ್ರೊ.ಮಣಿಕಂದನ್, ವಿಶೇಷಾಕಾರಿಗಳಾದ ಡಾ.ಬಿ.ಸರೋಜ, ಡಾ.ಸೂರ್ಯಕಾಂತ್, ವಿವಿ ವೌಲ್ಯಮಾಪನ ಕುಲಸಚಿವ ಪ್ರೊ.ಎಂ.ಯರಿಸ್ವಾಮಿ, ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ರಾಘವೇಂದ್ರ ತ್ತೇಪುರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಯಕ್ರಮ ಸಂಯೋಜಕ ಡಾ.ಎಂ.ರವಿ ಹಾಗೂ ವಿವಿಧ ಕಾಲೇಜು ಪ್ರಾಚಾರ್ಯರು ಉಪಸ್ಥಿತರಿದ್ದರು.