ನಿರ್ವಹಣೆ ಇಲ್ಲದೆ ತುಕ್ಕು ಹಿಡಿದ ಜಿಒಎಸ್. 
ಜಿಲ್ಲೆ

ಹಳ್ಳಿಗಳಲ್ಲಿ ಉಪಯೋಗಕ್ಕಿರದ ಜಿಒಎಸ್: ಲೈನ್‌ಫಾಲ್ಟ್ ಹುಡುಕುವ ಸುಲಭ ವ್ಯವಸ್ಥೆಗೆ ನಿರ್ವಹಣೆ ಸಮಸ್ಯೆ : ಕಳಚಿ ಬರುವ ಬಿಡಿಭಾಗ

ಸೌಮ್ಯ ಆರ್

ಮನೋಹರ ಬಳಂಜ ಬೆಳ್ತಂಗಡಿ

ವಿದ್ಯುತ್ ಲೈನ್‌ಫಾಲ್ಟ್ ಹುಡುಕಲು ಸುಲಭ ವ್ಯವಸ್ಥೆಯಾಗಿರುವ ಜಿಒಎಸ್(ಜನರಲ್ ಆಪರೇಟಿಂಗ್ ಸಿಸ್ಟಮ್)ಗಳು ನಿರ್ವಹಣೆ ಇಲ್ಲದೆ ತುಕ್ಕು ಹಿಡಿದು ಚಾಲೂ ಮಾಡಲು ಆಗದ ಕಾರಣ ಹೆಚ್ಚಿನ ಕಡೆಗಳಲ್ಲಿ ಉಪಯೋಗಕ್ಕೆ ಇಲ್ಲದಂತಾಗಿದೆ.

ವಿದ್ಯುತ್ ಪೂರೈಕೆ ವ್ಯವಸ್ಥೆಯ ಪರಿವರ್ತಕಗಳನ್ನು ಪ್ರದೇಶದ ಲೋಡ್ ಆಧಾರದ ಮೇಲೆ ಅಲ್ಲಲ್ಲಿ ಅಳವಡಿಸಲಾಗುತ್ತದೆ. ಪರಿವರ್ತಕಗಳಲ್ಲಿ ಅಥವಾ ಒಂದು ಪರಿವರ್ತಕದಿಂದ ಇನ್ನೊಂದು ಪರಿವರ್ತಕದ ವ್ಯಾಪ್ತಿಯ ಒಂದು ಕಡೆಯ ಕಂಬಗಳಲ್ಲಿ ಜಿಒಎಸ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ. ಸಾಮಾನ್ಯವಾಗಿ ಇದು ಸುಮಾರು 200 ಮೀ. ವ್ಯಾಪ್ತಿಯಲ್ಲಿ ಕಂಡುಬರುತ್ತದೆ.

ಜಿಒಎಸ್‌ಗಳು ಆಯಾ ಪ್ರದೇಶಗಳಲ್ಲಿ ಸುಗಮ ವಿದ್ಯುತ್ ಪೂರೈಕೆಗಾಗಿ ಇರುವ ವ್ಯವಸ್ಥೆ. ಒಂದು ಪರಿವರ್ತಕದಿಂದ ಇನ್ನೊಂದು ಪರಿವರ್ತಕ ವ್ಯಾಪ್ತಿಯಲ್ಲಿ ಸಮಸ್ಯೆ ಕಂಡು ಬಂದರೆ ಆ ವೇಳೆ ಒಂದೊಂದೇ ಜಿಒಎಸ್‌ಗಳನ್ನು ಆಫ್ ಮಾಡಿ ಸಮಸ್ಯೆ ಹುಡುಕಲಾಗುತ್ತದೆ. ಇದು ಮೆಸ್ಕಾಂ ಸಿಬ್ಬಂದಿಗೆ ಸಮಸ್ಯೆ ಹುಡುಕಲು ಸಹಕಾರಿ. ಈ ವ್ಯವಸ್ಥೆ ಇರುವುದು ಒಂದು ಕಡೆ ಲೈನ್ ಫಾಲ್ಟ್ ಬಂದರೆ ಇಡೀ ಪ್ರದೇಶದ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸದೆ, ಸಮಸ್ಯೆ ಇರುವ ಲೈನ್‌ನಲ್ಲಿ ಮಾತ್ರ ವಿದ್ಯುತ್ ಸ್ಥಗಿತಗೊಳಿಸಿ ರಿಪೇರಿ ಮಾಡುವುದಕ್ಕಾಗಿ.

ನಿರ್ವಹಣೆಯೇ ಇಲ್ಲ

ಈ ಜಿಒಎಸ್‌ಗಳನ್ನು ಕಾಲಕಾಲಕ್ಕೆ ನಿರ್ವಹಣೆ ಮಾಡಿ ಅದರ ಉಪಯೋಗ ಮಾಡಬೇಕಾಗಿರುವುದು ಮೆಸ್ಕಾಂನ ಕೆಲಸ. ಆದರೆ ಇದಕ್ಕೆ ಅಗತ್ಯವಿರುವ ಗ್ರೀಸಿಂಗ್, ಕಳಚಿ ಹೋಗಿರುವ ಬಿಡಿ ಭಾಗ ಜೋಡಣೆ ಇತ್ಯಾದಿಗಳನ್ನು ಮಾಡದ ಕಾರಣ ಇವು ಇದ್ದರೂ ಪ್ರಯೋಜನಕ್ಕೆ ಬರುತ್ತಿಲ್ಲ. ಸಂಪೂರ್ಣ ತುಕ್ಕು ಹಿಡಿದಿರುವ ಜಿಒಎಸ್‌ಗಳನ್ನು ಚಾಲನೆ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವು ಕಡೆಗಳಲ್ಲಿ ಬಿಡಿ ಭಾಗಗಳು ಕೈಗೆ ಬರುತ್ತಿವೆ. ಒಮ್ಮೆ ಚಾಲನೆ ಮಾಡಿ ಲೈನ್ ಆಫ್ ಮಾಡಿದರೆ ಮತ್ತೆ ಆನ್ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ಇವುಗಳು ಕಂಬದಲ್ಲಿರುವ ತಂತಿಗಳನ್ನು ಸಂಪರ್ಕಿಸದೆ ಇರುವ ಸ್ಥಿತಿ ಉಂಟಾಗುತ್ತದೆ. ಇವು ತಂತಿಗಳಿಗೆ ಸರಿಯಾಗಿ ಜೋಡಣೆಯಾಗದಿದ್ದರೆ ಬೆಂಕಿ ಕಿಡಿ ಉತ್ಪತ್ತಿಯಾಗಿ ತಂತಿಗಳು ಮುರಿದು ಬೀಳುವುದಿದೆ.

ಹಳ್ಳಿ ಭಾಗದಲ್ಲಿ ಅಧಿಕ

ಪೇಟೆ ಪ್ರದೇಶಗಳ ಜಿಒಎಸ್‌ಗಳು ಉತ್ತಮ ಸ್ಥಿತಿಯಲ್ಲಿವೆ. ಆದರೆ ಗ್ರಾಮೀಣ ಭಾಗದಲ್ಲಿ ಒಮ್ಮೆ ಜಿಒಎಸ್ ಅಳವಡಿಸಿದರೆ ಬಳಿಕ ಆದರೆ ನಿರ್ವಹಣೆ ಮಾಡದ ಕಾರಣ ಹೆಚ್ಚಿನ ಕಡೆಗಳಲ್ಲಿ ಇವು ಉಪಯೋಗಕ್ಕೆ ಸಿಗುತ್ತಿಲ್ಲ. ಈ ಕಾರಣದಿಂದ ಪೇಟೆ ಪ್ರದೇಶದಿಂದ ಗ್ರಾಮೀಣ ಭಾಗಕ್ಕೆ ವಿದ್ಯುತ್ ಪೂರೈಸುವ ಜಿಒಎಸ್‌ಗಳ ಸಂಪರ್ಕ ತಪ್ಪಿಸಲಾಗುತ್ತದೆ. ಇದು ಗ್ರಾಮೀಣ ಭಾಗದಲ್ಲಿ ನಿರಂತರ ವಿದ್ಯುತ್ ವ್ಯತ್ಯಯಕ್ಕೆ ಕಾರಣವಾಗುತ್ತಿದೆ. ಹಳ್ಳಿ ಭಾಗದಲ್ಲಿರುವ ಜಿಒಎಸ್‌ಗಳನ್ನು ಕಾಲಕಾಲಕ್ಕೆ ನಿರ್ವಹಣೆ ಮಾಡಿದರೆ ಮಳೆ, ಗಾಳಿ ಸಂದರ್ಭ ಸುಗಮ ವಿದ್ಯುತ್ ಪೂರೈಕೆ ಸಾಧ್ಯವಿದೆ.

ಗಿಡ-ಬಳ್ಳಿಗಳಿಂದ ಆವೃತ

ವಿದ್ಯುತ್ ಕಂಬ, ಪರಿವರ್ತಕ, ಜಿಒಎಸ್‌ಗಳು ಅನೇಕ ಕಡೆ ಬಳ್ಳಿ ಗಿಡಗಳಿಂದ ಆವೃತವಾಗಿರುವುದು ಕಂಡುಬರುತ್ತದೆ. ಇದು ಕೂಡ ವಿದ್ಯುತ್ ಪೂರೈಕೆಗೆ ಸಮಸ್ಯೆ ನೀಡುತ್ತಿದೆ. ಬೇಸಿಗೆಯಲ್ಲಿ ಇದು ಹಲವಾರು ಅಗ್ನಿ ಅನಾಹುತಗಳಿಗೆ ಕಾರಣವಾದರೆ, ಮಳೆಗಾಲದಲ್ಲಿ ವಿದ್ಯುತ್ ಪೂರೈಕೆಗೆ ಸಮಸ್ಯೆ ಆಗುತ್ತಿದೆ. ಪರಿವರ್ತಕ, ಜಿಒಎಸ್ ಹಾಗೂ ವಿದ್ಯುತ್ ಕಂಬಗಳಿಗೆ ಕೆಲವು ಪ್ರಚಾರದ ಬ್ಯಾನರ್ ಅಳವಡಿಸಿರುವುದೂ ಇದೆ.

ಕಾರ್ಯನಿರ್ವಹಿಸದ ಜಿಒಎಸ್‌ಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಮಳೆಗಾಲದ ತುರ್ತು ಕೆಲಸಗಳು ಮುಗಿದ ತಕ್ಷಣ ಆದ್ಯತೆ ಮೇರೆಗೆ ಇವುಗಳನ್ನು ದುರಸ್ತಿ ಪಡಿಸಲಾಗುವುದು. - ಕ್ಲೆಮೆಂಟ್ ಬೆಂಜಮಿನ್ ಬ್ರ್ಯಾಗ್ಸ್, ಎಇಇ, ಮೆಸ್ಕಾಂ ಬೆಳ್ತಂಗಡಿ https://www.vijayavani.net/information-workshop https://www.vijayavani.net/mla-harish-poonja-visited-belthangadi-taluk-office