ನಿರ್ವಹಣೆಯಿಲ್ಲದೆ ತುಕ್ಕು ಹಿಡಿಯುತ್ತಿರುವ ಉಪಕರಣಗಳು. 
ಜಿಲ್ಲೆ

ತುಕ್ಕು ಹಿಡಿದ ಕಸ ವಿಲೇವಾರಿ ವಾಹನ

ಕೋಲಾರ ಡೆಸ್ಕ್

ಗುಜರಿ ಅಂಗಡಿಯಂತಿದೆ ಕೋಲಾರ ನಗರಸಭೆ ಆವರಣ : ಲಾಂತರ ರೂಪಾಯಿ ತೆರಿಗೆ ಹಣ ಪೋಲು

ಕೋಲಾರ: ನಗರಸಭೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಹಾಗೂ ಸ್ವಚ್ಛತೆಗೆಂದು ಲಾಂತರ ರೂಪಾಯಿ ಖರ್ಚು ಮಾಡಿ ಖರೀದಿಸಿರುವ ಉಪಕರಣ ಮತ್ತು ಯಂತ್ರಗಳು ಸಮರ್ಪಕ ನಿರ್ವಹಣೆಯಿಲ್ಲದೆ ಉಪಯೋಗಕ್ಕೆ ಬಾರದೆ ನಗರಸಭೆ ಆವರಣದಲ್ಲಿ ತುಕ್ಕು ಹಿಡಿಯುತ್ತಿವೆ.
ನಗರದಲ್ಲಿ ಸಕಾಲಕ್ಕೆ ಕಸ ವಿಲೇವಾರಿ ಮಾಡಲು ಯಂತ್ರಗಳ ಕೊರತೆ ಇರುವುದರಿಂದ ಕಸದ ರಾಶಿ ಎಲ್ಲೆಂದರಲ್ಲಿ ಕೊಳೆಯುವಂತಾಗಿದೆ. ನಗರಕ್ಕೆ ಅಗತ್ಯ ಪ್ರಮಾಣದ ಯಂತ್ರಗಳು ಇಲ್ಲದಿರುವುದರಿಂದ ವಾರಗಟ್ಟಲೆ ಕಸ ವಿಲೇವಾರಿ ಸಾಧ್ಯವಾಗುತ್ತಿಲ್ಲ ಎಂಬ ದೂರು ಕೇಳಿಬಂದಿದೆ.
ನಗರಸಭೆ ಆವರಣದ ಶೆಡ್​ನಲ್ಲಿ ತಂದಿಟ್ಟಿರುವ ಈ ಯಂತ್ರಗಳ ವಿವಿಧ ಭಾಗಕ್ಕೆ ಸುತ್ತಿರುವ ಪ್ಯಾಕಿಂಗ್​ ಕವರ್​ ಹಾಗೆಯೇ ಇದೆ. ಇನ್ನೂ ಕೆಲವು ಯಂತ್ರಗಳು ನಿರ್ವಹಣೆಯಿಲ್ಲದೆ ತುಕ್ಕು ಹಿಡಿದಿವೆ. ಯಂತ್ರಗಳಲ್ಲಿರುವ ವೈರ್​ಗಳನ್ನು ಇಲಿ, ಹೆಗ್ಗಣಗಳು ಕಚ್ಚಿ ಹಾಳು ಮಾಡಿವೆ. ಹೊಸದಾಗಿ ಖರೀದಿಸಿರುವ ಯಂತ್ರಗಳು ಈಗಾಗಲೇ ಧೂಳು ಹಿಡಿದಿದ್ದು, ತುಕ್ಕು ಹಿಡಿಯುತ್ತಿವೆ.

ಒಂದು ರೋಡ್​ ಸ್ವೀಪಿಂಗ್​ ಬೆಲೆ 2 ಲಕ್ಷ:


ವರ್ಷದ ಹಿಂದೆ ನಾಲ್ಕು ರೋಡ್​ ಸ್ವೀಪಿಂಗ್​ ಯಂತ್ರ, ಛೇಂಬರ್​ ಸ್ವಚ್ಛಗೊಳಿಸುವ ಎರಡು ಬೇಲಿಂಗ್​ ಮಷಿನ್​ ಹಾಗೂ ಇತರ ಯಂತ್ರಗಳನ್ನು ತಂದಿಡಲಾಗಿದೆ. ಒಂದು ರೋಡ್​ ಸ್ವೀಪಿಂಗ್​ ಯಂತ್ರದ ಮೌಲ್ಯ ಸುಮಾರು 2 ಲಕ್ಷ ರೂ. ನಾಲ್ಕು ಯಂತ್ರಗಳ ಖರೀದಿಗೆ 8 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ. ಸಿಮ್ರಾನ್​ ಬುಸಿನೆಸ್​ ಸಲ್ಯೂಷನ್​ ಲಿಮಿಟೆಡ್​ ಸಂಸ್ಥೆಯಿಂದ ಖರೀದಿಸಿದ್ದು, ಈ ಬಗ್ಗೆ ಯಂತ್ರಗಳ ಮೇಲೆ ಮಾಹಿತಿಯಿದೆ. ಇನ್ನು ಛೇಂಬರ್​ ಸ್ವಚ್ಛಗೊಳಿಸುವ ಒಂದು ಬೇಲಿಂಗ್​ ಮಷಿನ್​ ಮೌಲ್ಯ ಅಂದಾಜು 4 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ. ಇವುಗಳ ನಿರ್ವಹಣೆ ಇಲ್ಲದಿರುವುದರಿಂದಾಗಿ ಇಷ್ಟು ಹಣ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ.

ಖರೀದಿಸಿದ ಬಳಿಕ ಅತ್ತ ಒಮ್ಮೆಯೂ ನೋಡಿಲ್ಲ!:
ನಗರಸಭೆ ಆಯುಕ್ತ ಶಿವಾನಂದ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಯಂತ್ರಗಳನ್ನು ಖರೀದಿಸಿದ ಬಳಿಕ ಬಳಕೆ ಮಾಡದೆ ಶೆಡ್​ನಲ್ಲೇ ಗೃಹಬಂಧನ ವಿಧಿಸಿದ್ದಾರೆ. ಅತ್ತ ಒಮ್ಮೆಯೂ ಗಮನಹರಿಸಿಲ್ಲ. ನಾವು ಪಾವತಿಸುವ ತೆರಿಗೆಯನ್ನು ಅಧಿಕಾರಿಗಳು ಅನಾಯಾಸವಾಗಿ ವ್ಯರ್ಥ ಮಾಡುತ್ತಿದ್ದಾರೆ ಎಂಬುದು ನಾಗರಿಕರ ದೂರು. ನಗರಸಭೆಯಲ್ಲಿ ಕಳೆದ ಒಂದು ವರ್ಷದಲ್ಲಿ ಮೂವರು ಆಯುಕ್ತರು ಬದಲಾಗಿದ್ದಾರೆ. ಈಗಿರುವವರು ನಾಲ್ಕನೆಯವರು. ಈವರೆಗೂ ಯಾರೊಬ್ಬ ಅಧಿಕಾರಿಯೂ ಈ ಬಗ್ಗೆ ಚಿತ್ತ ಹರಿಸಿಲ್ಲ ಎಂಬುದು ನೋವಿನ ಸಂಗತಿ.
ನಗರದ ಬಹುತೇಕ ರಸ್ತೆಗಳು ಧೂಳಿನಿಂದ ಕೂಡಿವೆ. ಹಲವೆಡೆ ಕಸದ ರಾಶಿಯೇ ಇದೆ. ರಾಜಕಾಲುವೆ ಸ್ವಚ್ಛಗೊಳಿಸಿಲ್ಲ. ಯುಜಿಡಿ ವ್ಯವಸ್ಥೆ ಸರಿ ಇಲ್ಲದೆ ಚೇಂಬರ್​ಗಳು ಕಟ್ಟಿಕೊಂಡು ಕೊಳಚೆ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ. ಹೀಗಿದ್ದೂ ಯಂತ್ರಗಳನ್ನು ಬಳಕೆ ಮಾಡುತ್ತಿಲ್ಲ.

ಜಿಲ್ಲಾಧಿಕಾರಿಗಳು ಒಮ್ಮೆ ಗಮನಹರಿಸಲಿ:

ಕೊತ್ತೂರು ಮಂಜುನಾಥ್​ ಶಾಸಕರಾಗಿ ಆಯ್ಕೆಯಾದ ಬಳಿಕ ನಗರಸಭೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಸ ವಿಲೇವಾರಿಗೆ ಮೊದಲ ಆದ್ಯತೆ ನೀಡಬೇಕು, ಮಳೆಗಾಲದೊಳಗಾಗಿ ಚರಂಡಿ ಸ್ವಚ್ಛಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಹೊಸದಾಗಿ ಆಗಮಿಸಿರುವ ಜಿಲ್ಲಾಧಿಕಾರಿ ಅಕ್ರಂಪಾಷಾ ಅವರು ವಾರದಿಂದ ನಗರದಲ್ಲಿ ಸಂಚಾರ ಕೈಗೊಂಡಿದ್ದಾರೆ. ಆದರೂ ನಗರದಲ್ಲಿ ಕಸ ವಿಲೇವಾರಿ ಆಗಿಲ್ಲ. ನಗರಸಭೆಯಲ್ಲಿ ತುಕ್ಕುಹಿಡಿದು ಧೂಳು ಮುಚ್ಚಿರುವ ಯಂತ್ರಗಳ ಕಡೆ ಒಮ್ಮೆ ಜಿಲ್ಲಾಧಿಕಾರಿ ಕಣ್ಣು ಹಾಯಿಸಲಿ ಎಂಬುದು ಸಾರ್ವಜನಿಕರ ಆಗ್ರಹ.

ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಜಿಲ್ಲಾಧಿಕಾರಿ ಅಕ್ರಂಪಾಷಾ ಮಾಹಿತಿ ನೀಡಿ, 30ರಷ್ಟು ಸಿಬ್ಬಂದಿ ಇದ್ದು, ಕೆಲವರನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ. ಹೀಗಾಗಿ ಕೆಲಸ ವಿಳಂಬವಾಗುತ್ತಿದೆ. ಈ ಸಂಬಂಧ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದಿದ್ದರು.


ಯಂತ್ರಗಳು ಬಳಕೆ ಆಗದಿರುವ ವಿಚಾರ ನನ್ನ ಗಮನಕ್ಕೂ ಬಂದಿದೆ. ಯಂತ್ರಗಳು ಸುಸ್ಥಿತಿಯಲ್ಲಿದ್ದು, ಸಿಬ್ಬಂದಿ ಕೊರತೆಯಿಂದ ಬಳಸಲು ಸಾಧ್ಯವಾಗಿಲ್ಲ. ಸದ್ಯದಲ್ಲೇ ಬಳಕೆ ಮಾಡಲಾಗುವುದು. ಮಹೇಶ್​, ಪರಿಸರ ಎಂಜಿನಿಯರ್​, ನಗರಸಭೆ, ಕೋಲಾರ