ಜಿಲ್ಲೆ

ರಸೆಲ್ ಮಾರುಕಟ್ಟೆ ಪುನರ್ ಅಭಿವೃದ್ಧಿಗೆ ಶೀಘ್ರ ಚಾಲನೆ

ಆರ್.ತುಳಸಿಕುಮಾರ್

ಬೆಂಗಳೂರು: ನಗರದ ರಸೆಲ್ ಮಾರುಕಟ್ಟೆಯ ಪುನರ್ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಅಂತಿಮ ಹಂತದಲ್ಲಿದ್ದು, ಅದನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರಲು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಗುರುವಾರ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ರಸೆಲ್ ಮಾರುಕಟ್ಟೆ ಪಾರಂಪರಿಕ ಕಟ್ಟಡವಾಗಿದ್ದು, ಅದಕ್ಕೆ ಆಧುನಿಕ ಸ್ಪರ್ಷ ನೀಡಿ ಜನಸ್ನೇಹಿ ಮಾರುಕಟ್ಟೆಯಾಗಿ ರೂಪಿಸಲಾಗುವುದು. ಪುನರ್ ವಿನ್ಯಾಸಗೊಳಿಸುವ ಮಾರುಕಟ್ಟೆಯಲ್ಲಿ ಸಂಚಾರದ ಸುಲಭತೆ, ದೃಶ್ಯಾವಲೋಕನ ಹಾಗೂ ಪ್ರವೇಶ ಸೌಲಭ್ಯಕ್ಕೆ ಆದ್ಯತೆ ನೀಡಲಾಗುವುದು. ಮಾರಾಟಗಾರರು ಹಾಗೂ ಗ್ರಾಹಕರಿಗೆ ಅನುಕೂಲವಾಗುವ ರೀತಿ ಮರುರಚನೆ ಮಾಡಲಾಗುವುದು ಎಂದರು.

ಮಾರುಕಟ್ಟೆಯಲ್ಲಿ ಪಾರ್ಕಿಂಗ್, ಅಗ್ನಿ ಸುರಕ್ಷತಾ ವ್ಯವಸ್ಥೆ, ಒಳಚರಂಡಿ, ನೀರು, ವಿದ್ಯುತ್, ಶೌಚಾಲಯ, ಸಮಗ್ರ ತ್ಯಾಜ್ಯ ವಿಂಗಡಣೆ ಹಾಗೂ ಕಾಂಪೋಸ್ಟಿಂಗ್ ವ್ಯವಸ್ಥೆ ಇರಲಿದೆ. ಜತೆಗೆ ಸೌರಶಕ್ತಿ, ಮಳೆನೀರು ಕೊಯ್ಲು ಅಳವಡಿಸಲಾಗುತ್ತದೆ ಎಂದು ತಿಳಿಸಿದರು.

ಸ್ವಚ್ಛತಾ ಕಾರ್ಯ ನಡೆಸಿ:

ರಸೆಲ್ ಮಾರುಕಟ್ಟೆ ಆವರಣದ ಸುತ್ತಲಿನ ಪ್ರದೇಶದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡಿರುವುದನ್ನು ಗಮನಿಸಿ, ಸ್ವಚ್ಚತಾ ಅಭಿಯಾನ ನಡೆಸಲು ವೇಳಾಪಟ್ಟಿ ಸಿದ್ಧಪಡಿಸಿ, ಶುಚಿ ಕಾರ್ಯ ನಡೆಸಬೇಕು. ಜತೆಗೆ ಸ್ಥಳದಲ್ಲಿರುವ ಎಲ್ಲ ಮಳಿಗೆಗಳಿಗೆ ತ್ಯಾಜ್ಯವನ್ನು ಎಲ್ಲೆಂದಲ್ಲಿ ಬಿಸಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಮಾರುಕಟ್ಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆ ನೀರುಗಾಲುವೆಗಳ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಲುವೆಗಳಲ್ಲಿ ಹೂಳೆತ್ತಿ ಸ್ವಚ್ಛಗೊಳಿಸಿ ಬಾಕಿಯಿರುವ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಆಯುಕ್ತರು ಸೂಚನೆ ನೀಡಿದರು.

ಮೂಲ ಸ್ವರೂಪಕ್ಕೆ ಧಕ್ಕೆ ಆಗದಂತೆ ನಿರ್ಮಾಣ:

ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಶಿವಾಜಿನಗರ ವ್ಯಾಪ್ತಿಯಲ್ಲಿರುವ ರಸೆಲ್ ಮಾರುಕಟ್ಟೆಯು ಅತ್ಯಂತ ಪುರಾತನ ಕಟ್ಟಡವಾಗಿದ್ದು, ಅದಕ್ಕೆ ಯಾವುದೇ ರೀತಿಯ ಧಕ್ಕೆ ಬಾರದಂತೆ ನಿರ್ಮಾಣ ಮಾಡಬೇಕು. ಸ್ಥಳಿಯವಾಗಿ ಯಾವುದೇ ಸಮಸ್ಯೆಗಳಾಗಂತೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಮುಖ್ಯ ಅಭಿಯಂತರ ವಿಜಯ್ ಕುಮಾರ್ ಹರಿದಾಸ್ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

ತಪಾಸಣೆಯ ವೇಳೆ ಸೂಚಿಸಿದ ಪ್ರಮುಖಾಂಶ:

* ಭಾರತಿನಗರದಲ್ಲಿನ ಸಮುದಾಯ ಭವನ ಕಾಮಗಾರಿ ತ್ವರಿತಗೊಳಿಸಿ ಪೂರ್ಣಗೊಳಿಸಬೇಕು.

* ಪೂರ್ ಹೌಸ್ ಆಸ್ಪತ್ರೆ ಕಾಮಗಾರಿ ಬ್ರ್ಯಾಂಡ್ ಬೆಂಗಳೂರು. ಪಾಲಿಕೆಯಿಂದ ಕೈಗೆತ್ತಿಕೊಂಡಿದ್ದು, ಶೀಘ್ರ ಸಾರ್ವಜನಿಕ ಸೇವೆ ಬಳಕೆಗೆ ಕ್ರಮ.

* ಕ್ವೀನ್ಸ್ ರಸ್ತೆಯ ಬಳಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕಾಗಿ ಜಾಗ ಗುರುತಿಸಿದ್ದು, ಕಾಮಗಾರಿ ಚುರುಕುಗೊಳಿಸಬೇಕು.

* ಹಫೀಝಿಯಾ ಶಾಲೆ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು.