ಜಿಲ್ಲೆ

ಇ-ಕೆವೈಸಿ ನೋಂದಣಿಗೆ ನೂಕು ನುಗ್ಗಲು

ಲಲಾಟಾಕ್ಷ ಎಸ್

ಬೇಲೂರು: ಅಡುಗೆ ಅನಿಲ ಕಂಪನಿಯಿಂದ ಹಲವು ಸೌಲಭ್ಯಗಳನ್ನು ಪಡೆಯಲು ಡಿ.31 ಕೊನೆಯ ದಿನದೊಳಗೆ ಇ-ಕೆವೈಸಿ ಮಾಡಿಸಬೇಕೆಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹರಿದಾಡಿದ ಹಿನ್ನೆಲೆಯಲ್ಲಿ ಸಾವಿರಾರು ಗ್ರಾಹಕರು ಗುರುವಾರ ಬೆಳಗ್ಗಿನಿಂದಲೇ ಆಧಾರ್ ಕಾರ್ಡ್, ಗ್ಯಾಸ್‌ಪಾಸ್ ಪುಸ್ತಕ ಹಿಡಿದು ಬಂಟೇನಹಳ್ಳಿಯಲ್ಲಿರುವ ಗ್ಯಾಸ್ ಏಜೆನ್ಸಿ ಕಚೇರಿ ಸಾಲುಗಟ್ಟಿ ನಿಂತಿದ್ದರು.


ಡಿ.31ರೊಳಗೆ ಎಚ್‌ಪಿ ಗ್ಯಾಸ್ ಸಂಪರ್ಕ ಪಡೆದಿರುವ ಗ್ರಾಹಕರು ಇ-ಕೆವೈಸಿ ಮಾಡಿಸಲು ಕೊನೆಯ ದಿನದೊಳಗೆ ನೋಂದಣಿ ಮಾಡಿಸಿದರೆ ಸರ್ಕಾರದ ಸೌಲಭ್ಯ ದೊರೆಯುತ್ತದೆ. ಇಲ್ಲದಿದ್ದಲ್ಲಿ ಯಾವುದೇ ಸಬ್ಸಿಡಿ ದೊರಕದೆ ಗ್ರಾಹಕರು ದುಪ್ಪಟ್ಟು ಹಣ ನೀಡಿ ಗ್ಯಾಸ್ ಖರೀದಿಸಬೇಕಾಗುತ್ತದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ಹಾಗಾಗಿ ಗ್ರಾಹಕರು ತಾಲೂಕಿನ ಬಂಟೇನಹಳ್ಳಿಯಲ್ಲಿರುವ ಶ್ರೀ ಚನ್ನಕೇಶವ ಗ್ಯಾಸ್ ವಿತರಣಾ ಕಚೇರಿ ಎದುರು ದಾಖಲೆಗಳನ್ನು ಅಪ್‌ಡೇಟ್ ಮಾಡಿಸಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದರು.


ಗ್ಯಾಸ್ ಏಜೆನ್ಸಿ ಸಿಬ್ಬಂದಿ ದಿನಕ್ಕೆ 125 ಜನ ಗ್ರಾಹಕರಿಗೆ ಮಾತ್ರ ಇ-ಕೆವೈಸಿ ಮಾಡಲು ಸಾಧ್ಯ ಎಂದರೂ ಗ್ರಾಹಕರು ಕಚೇರಿ ಎದುರು ಸಂಜೆವರೆಗೂ ಕಾದು ಕುಳಿತಿದ್ದರು.
ಶ್ರೀ ಚನ್ನಕೇಶವ ಗ್ಯಾಸ್ ಏಜೆನ್ಸಿ ಮಾಲೀಕರಾದ ಲತಾ ಮಂಜೇಶ್ವರಿ ಮಾತನಾಡಿ, ಇ-ಕೆವೈಸಿ ಮಾಡಿಸುವಂತೆ ತಿಂಗಳ ಹಿಂದೆಯೇ ಸೂಚನೆ ಬಂದಿದೆ. ಆದರೆ, ಕೊನೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದ್ದರಿಂದ ಗ್ರಾಹಕರು ಯಾವುದೇ ಗೊಂದಲಕ್ಕೊಳಗಾಗದೆ ನಿಧಾನವಾಗಿ ಆಧಾರ್‌ಕಾರ್ಡ್ ಹಾಗೂ ಗ್ಯಾಸ್ ಪುಸ್ತಕ ನೀಡಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು ಎಂದರು.


ಗ್ಯಾಸ್ ಏಜೆನ್ಸಿ ವ್ಯವಸ್ಥಾಪಕ ಕೃಷ್ಣಮೂರ್ತಿ ಮಾತನಾಡಿ, ಇ-ಕೆವೈಸಿಯನ್ನು ಎಲ್ಲರೂ ಕಡ್ಡಾಯವಾಗಿ ಮಾಡಿಸಬೇಕು. ಕೇಂದ್ರ ಸರ್ಕಾರದಿಂದ ಈವರೆಗೂ ಕೊನೆಯ ದಿನಾಂಕ ನಿಗದಿಯಾಗಿಲ.್ಲ ನಮ್ಮ ಏಜೆನ್ಸಿಯಿಂದ ಯಾವುದೇ ಪ್ರಚಾರ ನಡೆಸಿಲ್ಲ. ಇ-ಕೆವೈಸಿಯನ್ನು ದಿನಕ್ಕೆ 125 ಗ್ರಾಹಕರ ಮಾಡಲಾಗುತ್ತಿದ್ದು, ಗ್ರಾಹಕರು ಸಹಕರಿಸಬೇಕು ಎಂದು ಮನವಿ ಮಾಡಿದರು.