ಜಿಲ್ಲೆ

ಜಲ ಸಂಪನ್ಮೂಲ ವೃದ್ಧಿಗೆ ಯತ್ನ ಮಾಡೋಣ

ಎ. ಆರ್. ರಘುರಾಮ

 ಶನಿವಾರಸಂತೆ: ಕೆರೆಗಳನ್ನು ಅಭಿವೃದ್ಧಿ ಪಡಿಸುವುದರಿಂದ ಜಲ ಸಂಪನ್ಮೂಲ ವೃದ್ಧಿಯಾಗುತ್ತದೆ ಎಂದು ಶಾಸಕ ಡಾ.ಮಂಥರ್ ಗೌಡ ಅಭಿಪ್ರಾಯಪಟ್ಟರು. ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾದ ನಿಧಿಯಿಂದ ಬ್ಯಾಡಗೊಟ್ಟ ಗ್ರಾ.ಪಂ. ವ್ಯಾಪ್ತಿಯಬೆಂಬಳೂರು ಗ್ರಾಮದ ಬಾಣಂತಮ್ಮ ಕೆರೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. ಕೆರೆಗಳ ಹೂಳೆತ್ತಿ ಅಭಿವೃದ್ಧಿ ಪಡಿಸುವುದರಿಂದ ಹೆಚ್ಚು ಜಲ ಸಂಗ್ರಹವಾಗುತ್ತದೆ.ಇದರಿಂದ ಕೃಷಿ, ಜಾನುವಾರುಗಳಿಗೆ ಸಹಕಾರಿಯಾಗುತ್ತದೆ. ಬೇಸಿಗೆಯಲ್ಲಿ ನೀರು ಬಳಕೆಗೆ ಅನುಕೂಲವಾಗುತ್ತದೆ. ಸರ್ಕಾರದ ಕಾರ್ಯಗಳಿಗೆ ಜನರ ಬೆಂಬಲವೂ ಅಗತ್ಯ ಎಂದರು. ನಮ್ಮ ಸರ್ಕಾರ ಕೆರೆಗಳ ಉನ್ನತೀಕರಣ, ಸೇತುವೆಗಳ ಅಭಿವೃದ್ಧಿ, ಕುಡಿಯುವ ನೀರು, ಗ್ರಾಮೀಣ ರಸ್ತೆಗಳ ವಿಸ್ತರಣೆ ಮುಂತಾದವುಗಳಿಗೆ ಆದ್ಯತೆ ನೀಡುತ್ತಿದೆ. 125 ಲಕ್ಷ ರೂ. ವೆಚ್ಚದಲ್ಲಿ ಬಾಣಂತಮ್ಮ ಕೆರೆ ಅಭಿವೃದ್ಧಿ ಮಾಡಲಾಗುತ್ತಿದೆ. ಗುಣಮಟ್ಟದ ಕಾಮಗಾರಿ ನಡೆಯಲು ಗ್ರಾಮಸ್ಥರೂ ಬೆಂಬಲಿಸಬೇಕು ಎಂದರು.

ವಿವಿ ಉಳಿಸಿಕೊಳ್ಳಲು ಯತ್ನ: ಕೊಡಗು ವಿವಿ ಮುಚ್ಚುವ ಪ್ರಸ್ತಾವದ ಬಗ್ಗೆ ಪ್ರತಿಕ್ರಿಯಿಸಿದ ಡಾ.ಮಂಥರ್ ಗೌಡ, ಜಿಲ್ಲೆಯ ವಿದ್ಯಾರ್ಥಿಗಳಿಗೆ ಈ ವಿವಿ ಶಿಕ್ಷಣ ಆಧಾರ ಕೇಂದ್ರವಾಗಿದೆ. ಈ ನಿಟ್ಟಿನಲ್ಲಿ ವಿವಿ ಯನ್ನು ಇಲ್ಲೇ ಉಳಿಸಿಕೊಳ್ಳಲು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.