ಜಿಲ್ಲೆ

ಯುಗಾದಿ ಹಬ್ಬದ ಅಂಗವಾಗಿ ಮಾ.೩೦ರಂದು ಗ್ರಾಮೀಣ ಕ್ರೀಡಾಕೂಟ

ಮಡಿಕೇರಿ: ಯುಗಾದಿ ಹಬ್ಬದ ಅಂಗವಾಗಿ ನೆಹರು ಯುವ ಕೇಂದ್ರ ಮಡಿಕೇರಿ, ಕೊಡಗು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಮತ್ತು ತಾಲೂಕು ಯುವ ಒಕ್ಕೂಟ ಹಾಗೂ ಸ್ನೇಹಿತರ ಯುವಕ ಸಂಘದ ವತಿಯಿಂದ ಸ್ನೇಹಿತರ ಯುವಕ ಸಂಘದ ೪೨ನೇ ವರ್ಷದ ವಾರ್ಷಿಕೋತ್ಸವ ಹಾಗೂ ಗ್ರಾಮೀಣ ಕ್ರೀಡಾಕೂಟ ಅಡ್ಕದಬಾಣೆಯಲ್ಲಿ ಮಾ.೩೦ ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೋಳುಮುಡಿಯನ ಎ.ಮೋಹನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇಂದು ಬೆಳಗ್ಗೆ ೯ ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ತನ್ನ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ನಿವೃತ್ತ ಡಿವೈಎಸ್‌ಪಿ ಯಾಲದಾಳು ಕೇಶವನಂದ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಗಾಳಿಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾವತಿ, ಮಡಿಕೇರಿ ಶಿರಸ್ತೇದಾರ್ ಕರಕರನ ಮಧುಕರ್, ಗ್ರಾಮದ ಹಿರಿಯರಾದ ಕೆ.ಕೆ.ಧರ್ಮಾವತಿ, ಮಾಜಿ ಸೈನಿಕರಾದ ಕೋಚನ ಮನುಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಸಭಾಕಾರ್ಯಕ್ರಮದ ನಂತರ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗದಲ್ಲಿ ಮುಕ್ತ ಹಗ್ಗಜಗ್ಗಾಟ ನಡೆಯಲಿದೆ. ಅಲ್ಲದೇ, ಪುರುಷರಿಗೆ ವಾಲಿಬಾಲ್ ಪಂದ್ಯಾಟ, ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟ ನಡೆಯಲಿದೆ. ನಂತರ ಪುರುಷರಿಗೆ, ಮಹಿಳೆಯರಿಗೆ, ಹಿರಿಯ ಬಾಲಕ-ಬಾಲಕಿಯರಿಗೆ, ೧೦೦ ಮೀಟರ್ ಓಟದ ಸ್ಪರ್ಧೆ ನಡೆಯಲಿದೆ. ಕಿರಿಯ ಬಾಲಕ-ಬಾಲಕಿಯರಿಗೆ ೭೫ ಮೀ. ಓಟದ ಸ್ಪರ್ಧೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಭಾರದ ಕಲ್ಲು ಎಸೆತ, ಬಕೇಟ್‌ಗೆ ಚೆಂಡು ಹಾಕುವುದು, ೧,೫೦೦ ಮೀಟರ್ ಓಟ, ೧೦೦*೪ ರಿಲೆ ಓಟ, ವಯಸ್ಕರಿಗೆ ಓಟ, ಪಟ್ಟಣಕ್ಕೆ ಬಾಂಬ್, ಕೋಳಿ ಜಗಳ ಸೇರಿದಂತೆ ವಿವಿಧ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದ್ದಾರೆ.

ಸಂಜೆ ೩ ಗಂಟೆಗೆ ಸ್ನೇಹಿತರ ಯುವಕ ಸಂಘದ ಸ್ಥಾಪಕ ಅಧ್ಯಕ್ಷ ಕೋಳುಮುಡಿಯನ ಅನಂತಕುಮಾರ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಗಾಳಿಬೀಡು ಗ್ರಾಮ ಪಂಚಾಯಿತಿ ಪಿಡಿಒ ಶಶಿಕಿರಣ್, ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷ ಪಿ.ಪಿ.ಸುಕುಮಾರ್, ಮಡಿಕೇರಿ ತಾಲೂಕು ಅಧ್ಯಕ್ಷ ಬಾಳಾಡಿ ಎಂ.ದಿಲೀಪ್, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಕೋಚನ ಹರಿಪ್ರಸಾದ್, ಹೊದ್ದೂರು ಗ್ರಾ. ಪಂಚಾಯಿತಿ ಅಧ್ಯಕ್ಷ ಎಂ.ಹಂಸ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ನೃತ್ಯಕಲಾವಿದೆ ವಿಧುಷಿ ಕಾವ್ಯಶ್ರೀ ಕಪಿಲ್ ದುಗ್ಗಳ, ಗೌರವ ಡಾಕ್ಟರೇಟ್ ಪದವಿದರೆ ಟಿಶೋನಿ ಸಬೀನ್, ನಿವೃತ್ತ ಅಂಗನವಾಡಿ ಶಿಕ್ಷಕಿ ಕೋಳುಮುಡಿಯನ ಪ್ರೇಮಾವತಿ, ನಿವೃತ್ತ ಮಾಜಿ ಸೈನಿಕ ಪುದಿಯೊಕ್ಕಡ ಸುಜಯ್ ಅವರನ್ನು ಸನ್ಮಾನಿಸಲಾಗುವುದು. ೧೦ನೇ ತರಗತಿಯಲ್ಲಿ ಅತ್ಯದಿಕ ಅಂಕ ಪಡೆದ ಗಾಳಿಬೀಡು ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗುವುದು ಎಂದು ತಿಳಿಸಿದ್ದಾರೆ.