ಮೈಸೂರು: ಹಳ್ಳಿಗಾಡಿನ ಗ್ರಾಮೀಣ ಸೊಗಡು ಮಹಿಳಾ ದಸರಾದಲ್ಲಿ ಗರಿಬಿಚ್ಚಿತ್ತು.
ದಸರಾ ಮಹೋತ್ಸವದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜೆ.ಕೆ.ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನಾವರಣಗೊಂಡ ಗ್ರಾಮ ಸಂಸ್ಕೃತಿಯನ್ನು ನಗರವಾಸಿಗಳು ಕುತೂಹಲದಿಂದ ವೀಕ್ಷಿಸಿದರು.
ವಿವಿಧ ಆಟೋಟ ಸ್ಪರ್ಧೆಯಲ್ಲಿ ನಾರಿಯರು ಸಂಭ್ರಮದಿಂದ ಪಾಲ್ಗೊಳ್ಳುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ರಾಗಿ ಬೀಸುವ ಸ್ಪರ್ಧೆ, ಭತ್ತ ಕುಟ್ಟುವ ಸ್ಪರ್ಧೆ, ಹೂ ಕಟ್ಟುವ ಸ್ಪರ್ಧೆ, ಒಲೆ ರಹಿತ ಅಡುಗೆ ಸ್ಪರ್ಧೆಯಲ್ಲಿ ಉತ್ಸಾಸಹದಿಂದ ಭಾಗಿಯಾದರು.
ಭತ್ತ ಕುಟ್ಟುವ ಸ್ಪರ್ಧೆದಲ್ಲಿ ಹುಣಸೂರಿನ ಪುಟ್ಟಗಿರಿಯಮ್ಮ ಪ್ರಥಮ, ಲಕ್ಷ್ಮಮ್ಮ ದ್ವಿತೀಯ, ಕೆ.ಆರ್.ನಗರದ ಗೌರಮ್ಮ ತೃತಿಯ ಸ್ಥಾನದೊಂದಿಗೆ ಸಂಭ್ರಮಿಸಿದರು.
ರಾಗಿ ಬೀಸುವ ಸ್ಪರ್ಧೆಯಲ್ಲಿ ಹುಣಸೂರಿನ ಯಶೋದಾ ಪ್ರಥಮ, ಬಿಳಿಗೆರೆಯ ಮೂಲಮ್ಮ ದ್ವಿತೀಯ, ತಿ.ನರಸೀಪುರದ ಪುಟ್ಟಮ್ಮ 3ನೇ ಬಹುಮಾನ ಪಡೆದುಕೊಂಡರು.
ಹೂ ಕಟ್ಟುವ ಸ್ಪರ್ಧೆಯಲ್ಲಿ ಎಚ್.ಡಿ.ಕೋಟೆ ತಾಲೂಕಿನ ಚೆಲುವಮ್ಮ ಪ್ರಥಮ, ಮೈಸೂರು ತಾಲೂಕಿನ ಹೇಮಾ ಮತ್ತು ಪ್ರೇಮಾ ದ್ವಿತೀಯ, ತಿ.ನರಸೀಪುರ ತಾಲೂಕಿನ ನಿರ್ಲಾಂಭ ತೃತೀಯ ಸ್ಥಾನ ಪಡೆದರು.
ಒಲೆ ರಹಿತ ಅಡುಗೆ ಸ್ಪರ್ಧೆಯಲ್ಲಿ ಮೈಸೂರಿನ ಸುಷ್ಮಾ ಮೊದಲಿಗದರಾದರು. ಮೈಸೂರು ಗ್ರಾಮಾಂತರದ ಕೆಂಪಮ್ಮ ದ್ವಿತೀಯ, ಹರ್ಷಿತಾ ತೃತೀಯ ಸ್ಥಾನ ಗಿಟ್ಟಿಸಿಕೊಂಡರು. ನಂಜನಗೂಡಿನ ಎಚ್.ಎಂ.ಗೀತಾ, ತಿ.ನರಸೀಪುರದ ಟಿ.ವಿ.ವನಜಾಕ್ಷಿ, ಕೆ.ಆರ್.ನಗರದ ಸಿ.ಆರ್.ಕಲಾ ಸಮಾಧಾನಕರ ಬಹುಮಾನಕ್ಕೆ ತೃಪ್ತರಾದರು.
ಎಚ್.ಡಿ.ಕೋಟೆ, ತಿ.ನರಸೀಪುರ, ಮೈಸೂರು ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಹಾಸ್ಯ ಕಲಾವಿದೆ ಸುಧಾ ಬರಗೂರು ನಡೆಸಿಕೊಟ್ಟ ಹಾಸ್ಯ ಸಂಜೆ ರಂಜಿಸಿತು. ಸೋನಿಯಾ ಪೋದುವಾಳ ಅವರಿಂದ ಭರತ್ಯನಾಟ್ಯ, ಕೆ.ಪಿ.ಪುಷ್ಪಲತಾ ಅವರಿಂದ ಭಾವಗೀತೆ, ಭಕ್ತಿಗೀತೆ ಹಾಡುವ ಮೂಲಕ ಗಮನ ಸೆಳೆದರು.