ಜಿಲ್ಲೆ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಭಾಷೆ ಅಗತ್ಯ: ಶಿಕ್ಷಣ ಇಲಾಖೆ ಉಪ ಸಮನ್ವಯಾಧಿಕಾರಿ ರೇಣುಕಮ್ಮ ಸಲಹೆ

ಮಂಡ್ಯ: ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಭಾಷಾ ಜ್ಞಾನ ಅತ್ಯಂತ ಅವಶ್ಯಕ ಎಂದು ಶಿಕ್ಷಣ ಇಲಾಖೆ ಉಪ ಸಮನ್ವಯಾಧಿಕಾರಿ ರೇಣುಕಮ್ಮ ಸಲಹೆ ನೀಡಿದರು.

ನಗರದ ಗಾಂಧಿಭವನದಲ್ಲಿ ಕರ್ನಾಟಕ ನಾವಿನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ, ಮಾಹಿತಿ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಿಕ್ಷಣ ಇಲಾಖೆ ಆಯೋಜಿಸಿದ್ದ ಗ್ರಾಮೀಣ ಐಟಿ ರಸಪ್ರಶ್ನೆ-2023 ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ಪರ್ಧಾತ್ಮಕ ಕಾಲಘಟ್ಟದಲ್ಲಿರುವ ನವ ನವೀನ ತಂತ್ರಜ್ಞಾನಗಳನ್ನು ನೋಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಯಾವುದೇ ತಾಂತ್ರಿಕ ವಿಷಯಗಳ ಬಗ್ಗೆ ಮಾಹಿತಿ ಪಡೆಯಲು ಆಂಗ್ಲ ಭಾಷಾ ಪ್ರೌಢಿಮೆ ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆಂಗ್ಲ ಭಾಷೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದ ಅವರು, ಹಿಂದೆಲ್ಲ ಗ್ರಾಮೀಣ ಭಾಗದಲ್ಲಿ ಯಾವುದೇ ಸೌಲಭ್ಯಗಳಿಲ್ಲದ ಸಂದರ್ಭದಲ್ಲೂ ನಾವು ಅತ್ಯಂತ ಕಾಳಜಿಯಿಂದ ವಿದ್ಯಾಭ್ಯಾಸ ಮಾಡಿದ್ದೇವೆ. ಇದೀಗ ಮಕ್ಕಳಿಗೆ ಎಲ್ಲ ಸೌಲಭ್ಯಗಳೂ ಇವೆ. ಅವುಗಳನ್ನು ಬಳಸಿಕೊಂಡು ಅಭ್ಯಾಸ ಮಾಡಬೇಕು ಎಂದು ಕರೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತಾ ಮಾತನಾಡಿ, ರಸಪ್ರಶ್ನೆ, ಮಾಹಿತಿ ತಂತ್ರಜ್ಞಾನದ ಬಗ್ಗೆ ಅರಿವು ಬೆಳೆಸಿಕೊಂಡಲ್ಲಿ ಪ್ರಶ್ನೆಗೆ ಉತ್ತರಿಸುವುದು ಸುಲಭವಾಗುತ್ತದೆ. ಕಳೆದ ಹತ್ತು ವರ್ಷಗಳ ಹಿಂದೆ ನಮಗೆ ಕಂಪ್ಯೂಟರ್, ಸಿಪಿಯು, ಮಾನಿಟರ್, ಮಾಹಿತಿ ತಂತ್ರಜ್ಞಾನದ ಬಗ್ಗೆ ಅರಿವು ಇರಲಿಲ್ಲ. ನಮಗೆ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿಗೆ ಕಳುಹಿಸಿ ಅಲ್ಲಿ ಮಾಹಿತಿ ನೀಡುತ್ತಿದ್ದರು. ಆಗ ನಮಗೆ ಕಂಪ್ಯೂಟರ್ ಬಗ್ಗೆ ತಿಳಿಯಿತು ಎಂದು ವಿವರಿಸಿದರು.

ಈಗ ನಮ್ಮ ಮಕ್ಕಳ ಬೆರಳ ತುದಿಯಲ್ಲಿ ಮಾಹಿತಿ ಸಿಗುತ್ತದೆ. ಯಾವುದೇ ಮಾಹಿತಿ ಬೇಕಿದ್ದರೂ ಸಹ ಗೂಗಲ್‌ನಲ್ಲಿ ಸರ್ಚ್ ಮಾಡಿದರೆ ಲಭ್ಯವಾಗುತ್ತದೆ. ಅಂತಹ ಕಾಲಘಟ್ಟದಲ್ಲಿ ನಾವಿದ್ದೇವೆ. ಕಳೆದ ಬಾರಿ ನಮ್ಮ ಜಿಲ್ಲೆಯ ಮಕ್ಕಳು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತಂದಿದ್ದರು. ಈಗಲೂ ನಮ್ಮ ಮಕ್ಕಳು ರಾಷ್ಟ್ರಮಟ್ಟದಲ್ಲಿ ಭಾಗವಹಿಸುವಂತಾಗಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಸಮಾಜವಿಜ್ಞಾನ ವಿಷಯ ಪರಿವೀಕ್ಷಕ ನಾಗರಾಜು, ನಿವೃತ್ತ ವಿಷಯ ಪರಿವೀಕ್ಷಕ ಎಸ್.ಲೋಕೇಶ್, ಉರ್ದು ಶಿಕ್ಷಣ ಸಂಯೋಜಕ ಜಾಕೀರ್ ಪಾಷ, ವಿಜ್ಞಾನ ವಿಷಯ ಪರಿವೀಕ್ಷಕ ನಂಜರಾಜು, ತಾಂತ್ರಿಕ ಸಹಾಯಕ ಎಚ್.ಎಂ.ರಶ್ಮಿ, ಕಲಾಶಿಕ್ಷಕ ಡಿ.ಎನ್.ವೆಂಕಟೇಶ್, ರಮೇಶ್ ಇತರರಿದ್ದರು.