ಜಿಲ್ಲೆ

ಕೃಷಿಯು ಖುಷಿ ನೀಡುವ ಕಾಯಕವಾಗಲಿ

ಎ. ಆರ್. ರಘುರಾಮ

ಹುಣಸೂರು: ಕೃಷಿ ಎಂಬುದು ಖುಷಿ ನೀಡುವ ಕಾಯಕವಾದರೆ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವೆಂದು ಗಾವಡಗೆರೆ ಶ್ರೀ ಗುರುಲಿಂಗ ಜಂಗಮದೇವರ ಮಠದ ಶ್ರೀ ನಟರಾಜ ಸ್ವಾಮೀಜಿ ಹೇಳಿದರು. ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಆಯೋಜನೆಗೊಂಡಿದ್ದ ಕರ್ನಾಟಕ ರಾಜ್ಯ ಅಹಿಂದ ರೈತಸಂಘ ಉದ್ಘಾಟನೆ ಮತ್ತು ದೀಕ್ಷಾ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.

ನಮ್ಮೆಲ್ಲರ ಅನ್ನದಾತ ಈಗ ಬಸವಳಿಯುತ್ತಿದ್ದಾನೆ. ಅನ್ನ, ಜಲ ಮತ್ತು ಭಾಷೆ ಒಳ್ಳೆಯದಾಗಿದ್ದರೆ ದೇಶದ ಸರ್ವತೋಮುಖ ಅಭಿವೃದ್ದಿ ಸಾಧ್ಯ ಎಂದರು. ರೈತ ತನ್ನ ಭೂಮಿಯ ದಾಖಲೆಗಳಿಗಾಗಿ ಪರದಾಡುತ್ತಿದ್ದಾನೆ. ಆದರೆ ಸಂಪತ್ತು ಹೊಂದಿದವನು ಕ್ಷಣಮಾತ್ರದಲ್ಲಿ ದಾಖಲೆಗಳನ್ನು ಮನೆಬಾಗಿಲಿಗೆ ತರಿಸಿಕೊಳ್ಳುತ್ತಿದ್ದಾನೆ. ಇಂತಹ ವಿಪರ್ಯಾಸಗಳು ತೊಲಗ ಬೇಕು ಎಂದರು.

ಬೈಕ್ ರ‌್ಯಾಲಿ: ಸಮಾರಂಭಕ್ಕೂ ಮುನ್ನ ನಗರದ ಎಪಿಎಂಸಿ ವೃತ್ತದಲ್ಲಿರುವ ಅರಸು ಪುತ್ಥಳಿಗೆ ಸಂಘದ ಸದಸ್ಯರು ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿ ಬೈಕ್ ರ‌್ಯಾಲಿ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿಬಂದರು. ಗಣ್ಯರಿಂದ ಚಾವಟಿ ಸ್ವೀಕರಿಸುವ ಮೂಲಕ ಸೋಮನಹಳ್ಳಿ ಶಿವಶೇಖರ್ ಅಧಿಕಾರ ಸ್ವೀಕರಿಸಿದರು.

ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ನಾಗವಾಲ ನರೇಂದ್ರ, ಕಳಸ ಬಂಡೂರಿ ರೈತ ಹೋರಾಟಗಾರ ನರಗುಂದದ ಡಾ.ಸಂಗಮೇಶ್ ಕೊಳ್ಳಿಯವರ್ ಮಾತನಾಡಿದರು. ಮುಖಂಡರಾದ ಎ.ಪಿ.ಸ್ವಾಮಿ, ಡಿ.ಕೆ.ಕುನ್ನೇಗೌಡ, ಸತ್ಯಪ್ಪ, ವರದರಾಜು, ಇಂಟೆಕ್ ರಾಜು, ರಾಯನಹಳ್ಳಿ ಸ್ವಾಮಿ, ರಮೇಶ್, ಜಾರ್ಜ್, ತೊಂಡಾಳು ಶಂಕರ್, ಕೊಳಗಟ್ಟ ಕೃಷ್ಣ ಸೇರಿದಂತೆ ರೈತರು ಹಾಜರಿದ್ದರು.