ವಿಜಯವಾಣಿ ಸುದ್ದಿಜಾಲ ನೆಲಮಂಗಲ
ರಾಜ್ಯ ಸರ್ಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರನ್ನು ಬೆಂಗಳೂರು ಉತ್ತರ ಜಿಲ್ಲೆಯಾಗಿ ಬದಲಿಸುವುದನ್ನು ಖಂಡಿಸಿ ವಿವಿಧ ಸಂಘಟನೆ ಪದಾಧಿಕಾರಿಗಳು ಪ್ರವಾಸಿ ಮಂದಿರ ಬಳಿ ಶುಕ್ರವಾರ ಪ್ರತಿಭಟಿಸಿ ವಿಶೇಷ ತಹಸೀಲ್ದಾರ್ ಕಲಾವತಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ರವಾನಿಸಿದರು.
ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಆರ್.ಭಾಸ್ಕರ್‌ಪ್ರಸಾದ್ ಮಾಡನಾಡಿ, ಸರ್ಕಾರ ಜಿಲ್ಲೆಯ ಹೆಸರು ಬದಲಾವಣೆ ಮಾಡಿ ಜನರ ಭಾವನೆಗೆ ಧಕ್ಕೆ ತರುವಂತಹ ಕೆಲಸ ಮಾಡಿದೆ. ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ತಗೆದುಕೊಂಡು ಜಿಲ್ಲೆಯ ಹೆಸರು ಬದಲಾವಣೆ ಮಾಡಿದ್ದು, ಅವರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಎಂದರು.
ವೃಷಭಾವತಿ ಯೋಜನೆ ಹೆಸರಿನಲ್ಲಿ ಜನರಿಗೆ ವಿಷ ನೀಡಲು ಸರ್ಕಾರ ನಿಂತಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಜನರ ಜೀವದ ಜತೆಗೆ ಆಟ ಹಾಡುತ್ತಿರುವ ರಾಜ್ಯ ಸರ್ಕಾರ ವಿರುದ್ಧ ಎಲ್ಲರೂ ಒಗ್ಗೂಡಿಸಿ ದಿಕ್ಕರಿಸಬೇಕಿದೆ ಎಂದರು.
ಹೋರಾಟ ಸಮಿತಿ ಅಧ್ಯಕ್ಷ ಜಿ.ಉಮೇಶ್‌ಗೌಡ ಮಾತನಾಡಿ, ಗ್ರಾಮಾಂತರ ಜಿಲ್ಲೆ ಸಾಕಷ್ಟು ಇತಿಹಾಸ ಹೊಂದಿದ್ದು, ಗ್ರಾಮೀಣ ಪ್ರದೇಶ ಹೆಚ್ಚಾಗಿದೆ. ನಗರೀಕರಣದ ಹೆಸರಿನಲ್ಲಿ ಸರ್ಕಾರ ಗ್ರಾಮಾಂತರ ಜಿಲ್ಲೆಯ ಸತ್ವ ಹಾಗೂ ಹಳ್ಳಿಯ ಸೊಗಡು ಕಣ್ಮರೆ ಮಾಡಲು ಹೊರಟಿದೆ. ಆದ್ದರಿಂದ ಕೂಡಲೇ ರಾಜ್ಯ ಸರ್ಕಾರ ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆಯನ್ನಾಗಿ ಮಾಡಿರುವ ಆದೇಶವನ್ನು ಕೈಬಿಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿವರೆಗೂ ಸರ್ಕಾರ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರಚಾರ ಸಮಿತಿ ಅಧ್ಯಕ್ಷ ಎನ್. ಆರ್.ನಾಗರಾಜು, ಮಲ್ಲೇಶ್, ಗಂಗಾಧರ್, ವಿಜಯ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಆನಂದ್.ವೈ.ಮೌರ್ಯ, ಪದಾಧಿಕಾರಿಗಳಾದ ಮಂಜೇಗೌಡ, ರಮೇಶ್ , ವಿಜಯ್‌ಕುಮಾರ್, ಕೇಶವ್, ಶ್ರೀನಿವಾಸ್ ಶೈಲಜಾ, ಸೌಮ್ಯ, ಗೌರಮ್ಮ, ಸರಸ್ವತಿ ಇದ್ದರು.
ರೈತರನ್ನು ಒಕ್ಕಲೆಬ್ಬಿಸಲು ಸರ್ಕಾರ ಚಿಂತನೆ
ಜನಸಾಮಾನ್ಯರಿಗೆ ಯಾವುದೇ ಮಾಹಿತಿ ನೀಡದೆ ಸರ್ಕಾರ ಏಕಾಏಕಿ ಜಿಲ್ಲೆಯ ಹೆಸರು ಬದಲಾವಣೆ ಮಾಡಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದು ಹೋರಾಟ ಸಮಿತಿ ಉಪಾಧ್ಯಕ್ಷ ಗಂಗಬೈಲಪ್ಪ ಅಸಮಾಧಾನ ಹೊರಹಾಕಿದೆ. ರಾಜಕೀಯ ಪ್ರತಿಷ್ಠಿತೆಗಾಗಿ ಜಿಲ್ಲೆ ಹೆಸರು ಬದಲಾವಣೆ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಗ್ರಾಮಾಂತರ ಜಿಲ್ಲೆಯಲ್ಲಿ ಬಹುತೇಕ ರಾಜಕಾರಣಿಗಳು ನೂರಾರು ಎಕರೆ ಜಮೀನು ಸಂಪಾದನೆ ಮಾಡಿದ್ದಾರೆ. ಜಿಲ್ಲೆ ಹೆಸರು ಬದಲಾವಣೆಯಿಂದ ಜಮೀನು ಬೆಲೆ ದುಪ್ಪಟ್ಟು ಹಾಗುವ ಸಾಧ್ಯತೆ ಇದೆ. ರೈತರನ್ನು ಒಕ್ಕಲೆಬಿಸುವ ಕೆಲಸ ಸರ್ಕಾರ ಮಾಡಲು ಮುಂದಾಗಿದೆ ಎಂದರು.