ಹಾನಾಪೂರ ಎಲ್‌ಟಿ ಗ್ರಾಮದಲ್ಲಿ ವಾಗ್ದೇವಿ ದೇವಸ್ಥಾನ ನಿರ್ಮಾಣಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ನೀಡಿದ 2 ಲಕ್ಷ ರೂ .ದೇಣಿಗೆಯನ್ನು ದೇವಸ್ಥಾನದ ಸಮಿತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಚನ್ನಕೇಶವ ಹಸ್ತಾಂತರಿಸಿದರು. ಹುಲ್ಲಪ್ಪ ಚವ್ಹಾಣ, ಗೋಪಾಲ ಬಟ್ಟಡ, ಅಶೋಕ ನಾಯಿನೆಗಲಿ, ಮಹಾಂತೇಶ ಮತ್ತಿತರರಿದ್ದಾರೆ. 
ಜಿಲ್ಲೆ

ಅಭಿವೃದ್ಧಿಗೆ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರ

ದತ್ತಾತ್ರೇಯ ಪಿ ಕುಲಕರ್ಣಿ

ಗುಳೇದಗುಡ್ಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ತಾಲೂಕಿನಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಯೋಜನೆ ಜಿಲ್ಲಾ ನಿರ್ದೇಶಕ ಚನ್ನಕೇಶವ ಹೇಳಿದರು.

ಹಾನಪುರ ಎಲ್‌ಟಿ ಗ್ರಾಮದ ವಾಗ್ದೇವಿ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಧರ್ಮಸ್ಥಳದ ಧರ್ಮಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ನೀಡಿದ 2ಲಕ್ಷ ರೂ. ದೇಣಿಗೆ ದೇವಸ್ಥಾನದ ಕಮಿಟಿಗೆ ಹಸ್ತಾಂತರಿಸಿ ಮಾತನಾಡಿದ ಅವರು, ವ್ಯಕ್ತಿತ್ವ ಬದಲಾವಣೆ, ಕುಟುಂಬಗಳ ಸುಧಾರಣೆ, ಗ್ರಾಮಗಳ ಅಭಿವದ್ಧಿಯ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದರು.

ದೇವಸ್ಥಾನ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ, ವೃತ್ತಿ ಶಿಕ್ಷಣ ಪಡೆಯುವ ಮಕ್ಕಳಿಗೆ ಶಿಷ್ಯವೇತನ ನೀಡಲಾಗುತ್ತಿದ್ದು, ಅದರಂತೆ ಹಾನಾಪೂರ ಎಲ್‌ಟಿ ಗ್ರಾಮದಲ್ಲಿ ವಾಗ್ದೇವಿ ದೇವಸ್ಥಾನ ನಿರ್ಮಾಣಕ್ಕೆ ದೇಣಿಗೆ ನೀಡಲಾಗಿದೆ. ಅಲ್ಲದೇ ಯೋಜನೆಯಡಿ ತಾಲೂಕಿನಲ್ಲಿ ಒಟ್ಟು 5 ಕೆರೆಗಳ ಅಭಿವೃದ್ಧಿಪಡಿಸಿ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಿದೆ ಎಂದರು.

ಗ್ರಾಮದ ಹುಲ್ಲಪ್ಪ ಚವಾಣ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಮ್ಮ ಗ್ರಾಮದ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸುತ್ತಿದ್ದಾರೆ. ದೇವಸ್ಥಾನ ನಿರ್ಮಾಣಕ್ಕೆ ಅನುದಾನ ನೀಡಿದ್ದು ಸಂತೋಷವಾಗಿದೆ ಎಂದರು.

ಗೋಪಾಲ ಬಟ್ಟಡ, ಜಿಲ್ಲಾ ಜನ ಜಾಗೃತಿ ವೇದಿಕೆಯ ಸದಸ್ಯ ಅಶೋಕ ನಾಯಿನೆಗಲಿ, ತಾಲೂಕು ಯೋಜನಾಧಿಕಾರಿ ಮಹಾಂತೇಶ, ಗ್ರಾಮದ ಗಣೇಶ ನಾಯಕ, ಕೆ.ಪಿ. ರಾಠೋಡ, ಆರ್.ಕೆ. ಪಮ್ಮಾರ, ವಲಯದ ಮೇಲ್ವಿಚಾರಕ ಮಲ್ಲಿಕಾರ್ಜುನ, ಸೇವಾಪ್ರತಿನಿಧಿ ಪುಷ್ಪ ಮತ್ತಿತರರಿದ್ದರು.