ಜಿಲ್ಲೆ

ಸಿಇಒಗೆ ನಿಂದನೆ ಬೃಹತ್ ಪ್ರತಿಭಟನೆ: ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಪುಟ್ಟಮಾದು ವಿರುದ್ಧ ಆರೋಪ

ಮಂಡ್ಯ: ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಬಗ್ಗೆ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಪುಟ್ಟಮಾದು ಅವಹೇಳನಕಾರಿಯಾಗಿ ಮಾತನಾಡಿದ್ದು, ಕೂಡಲೇ ಆತನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ನಗರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು, ಸಿಬ್ಬಂದಿ, ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಕೈಗೆ ಕಪ್ಪುಪಟ್ಟಿ ಧರಿಸಿ ಬೃಹತ್ ಪ್ರತಿಭಟನೆ ನಡೆಸಿದರು.

ಜಿಪಂ ಕಚೇರಿ ಎದುರು ಜಮಾವಣೆಗೊಂಡ ಅಧಿಕಾರಿ ಹಾಗೂ ನೌಕರರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಪಂ ಉಪಕಾರ್ಯದರ್ಶಿಗಳಾದ ಪಿ.ಲಕ್ಷ್ಮೀ ಹಾಗೂ ಧನರಾಜ್ ನೇತೃತ್ವದಲ್ಲಿ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.

ಸಮಾಜದಲ್ಲಿ ಪರಿವರ್ತನೆಗೆ ಕಾರಣರಾಗುವ ಹೋರಾಟಗಾರರು, ವಿವಿಧ ಸಂಘಟನೆಗಳು ಮತ್ತು ಸಮಾಜಮುಖಿ ಸಂಸ್ಥೆಗಳ ಕಾರ್ಯಪ್ರವೃತ್ತಿಯ ಕುರಿತು ನಮಗೆ ಅಪಾರ ಗೌರವವಿದೆ. ಮಹಾತ್ಮಾ ಗಾಂಧಿ ನರೇಗಾ, ಜಲ ಜೀವನ ಮಿಷನ್, ಸ್ವಚ್ಛ ಭಾರತ ಮಿಷನ್, ವಸತಿ ಯೋಜನೆ ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹಲವಾರು ಯೋಜನೆ/ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಶ್ರಮಿಸುತ್ತಿದ್ದೇವೆ. ಕೆ.ಆರ್.ನಂದಿನಿ ಅವರು ಜಿಪಂ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ನಂತರದಲ್ಲಿ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಹಲವಾರು ವರ್ಷದಿಂದ ಬಾಕಿ ಇದ್ದ ಕೂಲಿ ಮತ್ತು ಸಾಮಗ್ರಿ ಮೊತ್ತ ಪಾವತಿಸಲು ಅನುಕೂಲವಾಗುವಂತೆ ಹಲವಾರು ಕ್ರಮ ತೆಗೆದುಕೊಂಡು ರೈತರು ಹಾಗೂ ಕೂಲಿ ಕಾರ್ಮಿಕರಿಗೆ ನೆರವಾಗಿದ್ದಾರೆ. ಕ್ರಿಯಾಯೋಜನೆ ಸಿದ್ಧಪಡಿಸುವಾಗ ಇದ್ದ ಗೊಂದಲಗಳನ್ನು ಪರಿಹರಿಸಿ ಸರ್ಕಾರಕ್ಕೆ ಅನುಮೋದನೆಗೆ ಸಲ್ಲಿಸಲು ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಮಾತ್ರವಲ್ಲದೆ ಉಳಿದ ಯೋಜನೆಯನ್ನು ಸಹ ಪಾರದರ್ಶಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಹಲವಾರು ರೀತಿ ಕ್ರಮ ತೆಗೆದುಕೊಂಡು ರಾಜ್ಯದಲ್ಲಿಯೇ ಮಂಡ್ಯ ಜಿಲ್ಲೆಗೆ ಉತ್ತಮ ಹೆಸರು ತರುವಂತಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ ಎಂದರು.

ಜೂ.14ರಂದು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದಿದ್ದ ಕೇಂದ್ರ ವಲಯ/ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಸೇರಿದಂತೆ ಇತರೆ ಯೋಜನೆಗಳ ಅನುಷ್ಠಾನದಲ್ಲಿ ಗಣನೀಯ ಪ್ರಗತಿ ಸಾಧಿಸಿರುವುದು ಗಮನಿಸಿ ಕೆ.ಆರ್.ನಂದಿನಿ ಅವರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪ್ರಶಂಸನಾ ಪತ್ರ ನೀಡಿದದಾರೆ. ಜನಪರ ಯೋಜನೆ/ಕಾರ್ಯಕ್ರಮಗಳ ಅನುಷ್ಠಾನಕ್ಕೆ ರೂಪುರೇಷೆ ಸಿದ್ಧಪಡಿಸಿ ಆಡಳಿತ ವ್ಯವಸ್ಥೆ ಚುರುಕುಗೊಳಿಸಿದ್ದಾರೆ. ಜು.4ರಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಜಿಪಂ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ದಿಶಾ ಸಮಿತಿ ಸಭೆ ವೇಳೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪ್ರತಿಭಟನಾಕಾರರ ಮನವಿ ಸ್ವೀಕರಿಸಲು ಸಿಇಒ ಕೆ.ಆರ್.ನಂದಿನಿ ಆಗಮಿಸಿದ್ದಾರೆ. ಈ ಸಮಯದಲ್ಲಿ ಪುಟ್ಟಮಾದು ನಿಂದನೆ ಮಾಡಿದ್ದಾರೆ. ನೀವು ಬಂದು ಜಿಲ್ಲೆಯನ್ನು ಹಾಳು ಮಾಡಿದ್ದೀರಿ ಎಂದು ಅವಹೇಳನಕಾರಿ ಹಾಗೂ ನಿಂದನಾತ್ಮಕವಾಗಿ ಘೋಷಣೆ ಕೂಗಿದ್ದಾರೆ. ಇದರಿಂದಾಗಿ ದಕ್ಷ, ಪ್ರಾಮಾಣಿಕ ಹಾಗೂ ನಿಷ್ಠಾವಂತ ಅಧಿಕಾರಿಯ ಕರ್ತವ್ಯ ನಿರ್ವಹಣೆಗೆ ಧಕ್ಕೆ ಉಂಟಾಗುವುದಲ್ಲದೇ ಕೆಳವರ್ಗದ ನೌಕರರು ಸಹ ಆತ್ಮಸ್ಥೈರ್ಯ ಕಳೆದುಕೊಂಡು ತಮ್ಮ ಕರ್ತವ್ಯದಲ್ಲಿ ಆಸಕ್ತಿ ಕಳೆದುಕೊಂಡು ಕುಗ್ಗಿ ಹೋಗುವ ಪರಿಸ್ಥಿತಿ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಪುಟ್ಟಮಾದು ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಪ್ರಶಾಂತ್‌ಬಾಬು, ಪ್ರಧಾನ ಕಾರ್ಯದರ್ಶಿ ಸುನೀಲ್, ಕ್ರೀಡಾ ಕಾರ್ಯದರ್ಶಿ ಪಿ.ಆರ್.ಹರೀಶ್, ಮಂಡ್ಯ ತಾಲೂಕು ಅಧ್ಯಕ್ಷ ಸುರೇಶ್ ಸೇರಿದಂತೆ ನೂರಾರೂ ಸಿಬ್ಬಂದಿ ಭಾಗವಹಿಸಿದ್ದರು.